ಭಾನುವಾರ, ಫೆಬ್ರವರಿ 17, 2013

ಕನ್ನಡ ಸೇರಿಕೆಗಳ ಅವಾಂತರ

ಇತ್ತೀಚಿಗೆ 'ಕನ್ನಡ ಶಾಲಾ ವ್ಯಾಕರಣ' ಎಂಬ ತಲೆ ಬರಹದ ಹೊತ್ತಗೆಯನ್ನು ಕಯ್ಗೆತ್ತಿಕೊಂಡು ನೋಡುತ್ತಾ, 'ಸಂದಿ ಪ್ರಕರಣ'ದತ್ತ ಕಣ್ಣು ಹಾಯಿಸಿದೆ. ಎಂದಿನಂತೆ ಅದರ ತಿರುಳು ಹೇಗಿತ್ತು: 'ಕನ್ನಡದಲ್ಲಿ ಎರಡು ಬಗೆಯ ಸೇರಿಕೆ(ಸಂದಿ)ಗಳಿವೆ, ಕನ್ನಡದ ಸೇರಿಕೆ ಮತ್ತು ಸಕ್ಕದದ ಸೇರಿಕೆ. ಕನ್ನಡ ಸೇರಿಕೆಗಳು  ಮೂರು ತೆರನಾದವು,  ಲೋಪ ಸಂದಿ, ಆಗಮ ಸಂದಿ, ಮತ್ತು ಆದೇಶ ಸಂದಿ. ಸಕ್ಕದದ ಸಂದಿಗಳು ಹಲವು: ಸವರ್ಣದೀರ್ಗ, ಯಣ್, ವ್ರುದ್ದಿ, ವಿಸರ್ಗ, ಅನುನಾಸಿಕ, ಜಶ್ತ್ವ, ಶ್ಚುತ್ವ, ಮುಂತಾದುವು'.   ನೀವು ಬೇರೆ ಯಾವುದೇ 'ಶಾಲಾ ವ್ಯಾಕರಣ'ದ ಹೊತ್ತಗೆ ನೋಡಿದರೂ ನಿಮಗೆ ಕಾಣ ಸಿಗುವುದು ಇದೇ . ನನಗೆ ನೆನಪಿದ್ದಂತೆ ನಾವು ಚಿಕ್ಕಂದಿನಲ್ಲಿದ್ದಾಗ ಕಲಿಮನೆಯಲ್ಲಿ (ಸ್ಕೂಲ್) ಕಲಿತದ್ದೂ ಹೆಚ್ಚು ಕಡಿಮೆ ಇದೇ. ಅಂದರೆ ಹಲವು ಪೀಳಿಗೆಯ ಕನ್ನಡದ ಮಕ್ಕಳಿಗೆ ಕನ್ನಡ ಸೇರಿಕೆಗಳ ಬಗ್ಗೆ ನಾವು ಹೇಳಿಕೊಡುತ್ತಿರುವುದು ಇದನ್ನೇ.

ಇದರ ಬಗ್ಗೆ ನನ್ನ ಮೂರು ಗಮನಿಕೆಗಳು:
೧. ಕನ್ನಡ ಸಂದಿ ಎಂದು ಹೇಳಿ ಸಕ್ಕದದ ಸೇರಿಕೆಗಳನ್ನು ತುರುಕಲಾಗಿದೆ.
೨. ಸಕ್ಕದದ ಸೇರಿಕೆಗಳನ್ನು ತುರುಕಿರುವುದು ಸಾಲದೆಂಬಂತೆ, ಕನ್ನಡದ ಸೇರಿಕೆಗಳನ್ನು ಒಂದೋ ಎರಡೋ ಹಾಳೆಬದಿಗಳಲ್ಲಿ ಮುಗಿಸಿ ಸಕ್ಕದ ಸೇರಿಕೆಗಳ ಬಗ್ಗೆ ಪುಟಗಳಗಟ್ಟಲೆ ಕುಯ್ಯಲಾಗಿದೆ.
೩. 'ವ್ರುದ್ದಿ', 'ಯಣ್' ಇಂತಹ ಸಕ್ಕದದ ಸೇರಿಕೆಗಳನ್ನು ನೋಡಿದರೆ ಅವುಗಳು ನಿಕರವಾದ ಸೇರಿಕೆಯ ಕಟ್ಟಲೆಗಳು ಎಂದು ಹೇಳಬಹುದು. ಆದರೆ ಕನ್ನಡದ 'ಲೋಪ', 'ಆದೇಶ', 'ಆಗಮ' ಎಂಬುವು ವಿಂಗಡಣೆಯಶ್ಟೇ, ನಿಕರವಾದ ಕಟ್ಟಲೆಗಳಲ್ಲ. ಈ ವಿಂಗಡಣೆ ಕೂಡ ಸಕ್ಕದದಿಂದ ಇಳಿಸಿದ್ದು ಮತ್ತು ಅದರಲ್ಲಿ ಸಾಕಶ್ಟು ತಪ್ಪುಗಳೂ ಇವೆ.

೧, ಮತ್ತು ೨ರ ಬಗ್ಗೆ, ಈಗಾಗಲೇ ಸಾಕಶ್ಟು ಚರ್ಚೆಗಳಾಗಿವೆ. ಅಂದರೆ, ಈ ಸೇರಿಕೆಗಳ ವಿಶಯವಾಗಿ ಮಾತ್ರ ಅಲ್ಲ, ಸಾಮಾನ್ಯವಾಗಿ ಕನ್ನಡದ ಸೊಲ್ಲರಿಮೆಯಲ್ಲಿ ಸಕ್ಕದದ ವ್ಯಾಕರಣ ತುರುಕಿರುವುದರ ಬಗ್ಗೆ ಸಾಕಶ್ಟು ಚರ್ಚೆಗಳಾಗಿವೆ. ಹಾಗಾಗಿ ಈ ಬರಹದಲ್ಲಿ ಮೊದಲೆರಡು ಅಂಶಗಳನ್ನು ಬಿಟ್ಟು ೩ರ ಬಗ್ಗೆ ಚರ್ಚೆ ಮಾಡುವೆ.

ಸಕ್ಕದದಲ್ಲಿ ಸೇರಿಕೆಗಳನ್ನು ಹಲವು ಬಗೆಯಲ್ಲಿ ವಿಂಗಡಿಸಲಾಗಿದೆ. ಲೋಪ, ಆಗಮ, ಆದೇಶ, ಪ್ರಕೃತಿ ಬಾವ ಎಂಬ ಒಂದು ಬಗೆಯ ವಿಂಗಡಣೆಯಾದರೆ ಸ್ವರ, ವ್ಯಂಜನ, ವಿಸರ್ಗ ಎಂಬುವು ಇನ್ನೊಂದು ಬಗೆಯ ವಿಂಗಡಣೆ. ಆದರೆ ಮೇಲೆ ಹೇಳಿದಂತೆ ಇದು ವಿಂಗಡಣೆಯಶ್ಟೇ, ಕಟ್ಟಲೆಗಳಲ್ಲ. 'ವೃದ್ದಿ', 'ಗುಣ', 'ಸವರ್ಣ ದೀರ್ಗ' ಇವುಗಳನ್ನು ನಿಕರವಾದ ಕಟ್ಟಲೆಗಳೆಂದು ಹೇಳಬಹುದು.

ಈಗ ಕನ್ನಡದ ಸೇರಿಕೆಗಳ ಕುರಿತು ಮಾತಾಡೋಣ. ನಮ್ಮ ಕನ್ನಡದ ಸೊಲ್ಲರಿಗರು (ವಯ್ಯಾಕಾರಣಿಗಳು) ಎಶ್ಟೋ  ತೆರನಾದ ಸೇರಿಕೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ, ಯಾವುದೋ ಒಂದಶ್ಟು ಸೇರಿಕೆಯ ಪದಗಳನ್ನು ತೆಗೆದುಕೊಂಡು, ಅವುಗಳಿಗೆ ಸಕ್ಕದ ವಿಂಗಡಣೆಯಾದ 'ಲೋಪ', 'ಆಗಮ', 'ಆದೇಶ' ಎಂಬುವುಗಳನ್ನು ಬೇಕಾಬಿಟ್ಟಿಯಾಗಿ ಹೊಂದಿಸಿ ಕಯ್ ತೊಳೆದು ಕೊಂಡಿದ್ದಾರೆ. ಇದಕ್ಕೆ ಕೆಲವು ಎತ್ತುಗೆಗಳನ್ನು ಕೊಡುತ್ತೇನೆ.

ನಿಟ್ಟುಸಿರು  = ನಿಡು + ಉಸಿರು
ಈ ಸೇರಿಕೆಯನ್ನು ಆದೇಶ ಸಂದಿ ಎಂದು ವಿವರಿಸಲಾಗುತ್ತದೆ. ಇಲ್ಲಿ 'ಡ' ಕಾರ ಎರಡು 'ಟ'ಕಾರವಾಗಿದೆ. ಒಂದು ಡಕಾರದ ಬದಲಾಗಿ ಒಂದು 'ಟ'ಕಾರ ಬಂದಿದ್ದರೆ ಇದು ಬರಿಯ ಆದೇಶ ಸಂದಿ ಆಗಿರುತ್ತಿತ್ತು. ಆದರೆ ಇಲ್ಲಿ ಇನ್ನೊಂದು 'ಟ'ಕಾರ 'ಆಗಮಿ'ಸಿರುವುದರಿಂದ ಇದು ಆಗಮವೂ ಆಗಬಹುದಲ್ಲವೇ. ಹಾಗಿದ್ದ ಮೇಲೆ ಇದಕ್ಕೆ (ಮತ್ತು) ಇಂತಹಸೇರಿಕೆಗಳಿಗೆ ಬೇರೊಂದು ವಿಂಗಡಣೆ ಇರಬೇಕಲ್ಲವೇ?

ವಿಂಗಡಣೆ ಒಂದು ಕಡೆ ಇರಲಿ. ಆದರೆ ಕಟ್ಟಲೆ? ಅಂದರೆ, ಈ ತೆರನಾಗಿ 'ಡ'ಕಾರ (ಎರಡು) 'ಟ'ಕಾರವಾಗಿ ಬದಲಾಗುವ ಸಂದರ್ಬ ಮತ್ತು ಅಂತಹ ಕಟ್ಟಲೆಗಳೇನು? ಇದರ ಬಗ್ಗೆ ನಮ್ಮ ಸೊಲ್ಲರಿಗರು ತಲೆ ಕೆಡಿಸಿಕೊಂಡಂತಿಲ್ಲ.

ಈಗ ಇನ್ನೊಂದು ಆದೇಶ ಸಂದಿಯ ಎತ್ತುಗೆಯನ್ನು ನೋಡೋಣ:

ಮಳೆಗಾಲ = ಮಳೆ + ಕಾಲ 

ಇಲ್ಲಿ 'ಕ' ಎಂಬ ಕೊರಲಿಸದ (unvoiced) ಉಲಿ ಸೇರಿಕೆಯಾದ ಮೇಲೆ 'ಗ' ಎಂಬ ಕೊರಿಲಿಸಿದ (voiced) ಉಲಿಯಾಗುತ್ತದೆ. ಆದರೆ 'ನಿಟ್ಟುಸಿರು' ಎಂಬಲ್ಲಿ 'ಡ' ಎಂಬ ಕೊರಿಲಿಸಿದ ಉಲಿ 'ಟ' ಎಂಬ ಕೊರಿಲಿಸದ ಉಲಿಯಾಗಿ ಬದಲಾಗುತ್ತದೆ. ಈ ಎರಡು ಬಗೆಯ 'ಆದೇಶ'ಗಳಿಗೆ ಎರಡು ಬೇರೆ ಬೇರೆ ವಿವರಣೆಗಳು ಬೇಕಲ್ಲವೇ?

ಇನ್ನು ಕೆಲವು ಎತ್ತುಗೆಗಳು:

(ಪೆ)ಹೆರ್  + ಆನೆ = ಹೇರಾನೆ 

ಇದು ಯಾವ ಸೇರಿಕೆ/ ಸಂದಿ? ಇಲ್ಲಿ ಲೋಪ, ಆಗಮ, ಆದೇಶ ಇಲ್ಲ, ಬದಲಾಗಿ ಮೊದಲನೇ ಬರಿಗೆಯ ತೆರೆಯುಲಿ (ಸ್ವರ) ಗಿಡ್ದವಾಗಿದ್ದುದು ಉದ್ದವಾಗಿದೆ.

ಕಿರ್ + ಓಟ = ಕಿತ್ತೋಟ 

ಇಲ್ಲಿ 'ರ'ಕಾರ ಇಮ್ಮಡಿ 'ತ'ಕಾರವಾಗಿದೆ. ಇದನ್ನು ಬರಿಯ ಆದೇಶ ಎಂದು ಹೇಳಿದರೆ ಸಾಕೇ?

ಎಂಬತ್ತು = ಎಣ್ + ಪತ್ತು -> ಇಲ್ಲಿ ಮೊದಲ ಪದದ ಕೊನೆಯ ಬರಿಗೆ (ಣ->ಮ) ಜೊತೆಯಲ್ಲಿ ಎರಡನೇ ಪದದ ಮೊದಲ ಪದವೂ ಬದಲಾಗಿದೆ. 

ತಂಪು = ತಣ್ + ಪು -> ಶಾಲಾ ವ್ಯಾಕರಣಗಳಲ್ಲಿ ಕಾಣುವ 'ಮಳೆಗಾಲ' ಎಂಬಂತಹ ಎತ್ತುಗೆಗಳಲ್ಲಿ ಎರಡನೇ ಪದದ ಮೊದಲ ಬರಿಗೆಯಲ್ಲಿ 'ಆದೇಶ'ವಾಗುತ್ತದೆ. ಆದರೆ ಇಲ್ಲಿ ಮೊದಲನೇ ಪದದ ಕೊನೆಯ ಬರಿಗೆಯಲ್ಲಿ ಆದೇಶವನ್ನು ಕಾಣಬಹುದು.

ಇನ್ + ಸರ = ಇಂಚರ -> 'ಮಳೆಗಾಲ', 'ನಿಟ್ಟುಸಿರು' ಎಂಬಲ್ಲಿ ಕೊರಲಿಸಿದ ಮತ್ತು ಕೊರಿಲಿಸದ ಉಲಿಗಳ ನಡುಮಾರ್ಪಾಟು ನಡೆಯುತ್ತದೆ. ಮತ್ತು ಅವೆರಡೂ ಒಂದೇ ವರ್ಗಕ್ಕೆ ಸೇರಿದವುಗಳು. ಅಂದರೆ ಕ-ಗ ಮತ್ತು ಟ-ಡ ಒಂದೇ ವರ್ಗದವು. ಆದರೆ ಇಲ್ಲಿ ಸ-ಚ ಎರಡೂ ಕೊರಲಿಸದ ಉಲಿಗಳು ಮತ್ತು ಎರಡೂ ಬೇರೆ ಬೇರೆ ವರ್ಗಗಳಿಗೆ ಸೇರಿದವು. ಇಂತಹವಕ್ಕೂ ಬೇರೆ ವಿಂಗಡಣೆ/ ವಿವರಣೆ ನೀಡಬೇಕಾಗುತ್ತದೆ.

ಆಗಮ ಸಂದಿಯ ಬಗ್ಗೆ ನಾವು ಕಲಿತಿರುವುದು ಯಕಾರಾಗಮ ಮತ್ತು ವಕಾರಾಗಮ. ಆದರೆ ನಿಜವಾಗಿಯೂ ಇವೆರಡೇ ಬಗೆಯ ಆಗಮ ಸಂದಿ ಇದೆಯೇ?

ರಾಮರಿಂದ = ರಾಮ + ಇಂದ (ರಕಾರಾಗಮ?)
ರಾಮ + ಇಂದ = ರಾಮನಿಂದ (ನಕಾರಾಗಮ?)
ಕೊಳ + ಇಂದ = ಕೊಳದಿಂದ (ದಕಾರಾಗಮ?)
ಒಂದು + ಇಂದ = ಒಂದರಿಂದ -> ಇಲ್ಲಿ 'ಉ' ಕಳೆದು (ಲೋಪ) ಹೋಗಿರುವುದಲ್ಲದೆ ರಕಾರದ 'ಆಗಮ'ವಾಗಿದೆ. ಇದು ಯಾವ ಸಂದಿ?

ಹೀಗೆ ನಮ್ಮ ಕನ್ನಡದ ಸೇರಿಕೆಗಳ ಬಗ್ಗೆ ಏನೂ ಆರಯ್ಕೆ (research) ನಡೆಸದೆ ಸುಮ್ಮನೇ ಸಕ್ಕದದ ಒಂದು ವಿಂಗಡಣೆಯನ್ನು ಕನ್ನಡಕ್ಕೆ, ತಪ್ಪು ತಪ್ಪಾಗಿದ್ದರೂ, ಹೊಂದಿಸಲು ಅದನ್ನು ತುರುಕಿರುವುದಲ್ಲದೇ ಸೇರಿಕೆಯ ಕಟ್ಟಲೆಗಳನ್ನು ವಿವರಿಸಿ ಕೊಳ್ಳುವ ಗೋಜಿಗೇ ನಾವು ಹೋಗಿಲ್ಲ. ಈ ನಿಟ್ಟಿನಲ್ಲಿ ನಮ್ಮ ಸೊಲ್ಲರಿಗರು ಇನ್ನೂ ಸಾಕಶ್ಟು  ಆರಯ್ಕೆ ನಡೆಸುವುದಿದೆ.

ಲೋಪ ಸಂದಿಯ ಬಗ್ಗೆ ಇಲ್ಲಿ ನಾನು ಎತ್ತುಗೆಗಳನ್ನು ಕೊಟ್ಟಿಲ್ಲ. ಆದರೆ ಅದರಲ್ಲಿ ಎಶ್ಟು 'ಲೋಪ'ಗಳಿವೆ ಎಂದರೆ ಅದಕ್ಕೆ ಇನ್ನೊಂದು ಬರಹವನ್ನೇ ಮೀಸಲಿಡುವೆ. ಹಾಗಾಗಿ ಮುಂದಿನ ಬರಹದಲ್ಲಿ ಅದರ ಬಗ್ಗೆ ಬರೆಯುವೆ.

ಶನಿವಾರ, ಜನವರಿ 26, 2013

ಬೆಂಗಳೂರು


ತಿಟ್ಟ: kar.nic.in


ಊರುಗಳ ಬಗ್ಗೆ ಮಾತಾಡ್ತಾ (ಹಿಂದಿನ ಬರಹ ಒಂದರಲ್ಲಿ ಬಾದಾಮಿ ಬಗ್ಗೆ ಬರೆದಿದ್ದೆ) ನಮ್ಮ ಬೆಂಗಳೂರಿನ ಬಗ್ಗೆ ಎರಡು ಮಾತು. ಇದು ನಮಗೆ ಗೊತ್ತಿರುವ ಮಾತೇ, ಆದರೂ ಮತ್ತೆ ಹೇಳ ಬಯಸುವೆ. ಬೆಂಗಳೂರು ಹೆಸರಿನ ಹುಟ್ಟಿನ ಬಗ್ಗೆ ಈಗ ಎಲ್ಲರಿಗೂ ಗೊತ್ತಿರುವ ಒಂದು (ಸುಳ್ಳು) ಕತೆ ಇದೆ. ಹಲವರು ಅದೇ ನಿಜ ಎಂದು ನಂಬಿದ್ದಾರೆ ಕೂಡ. ಕತೆ ಹೀಗಿದೆ: ಬೆಂಗಳೂರು ಸುಮಾರು ೧೨ನೇ  ನೂರ್ಮಾನದಲ್ಲಿ ಕಾಡಾಗಿತ್ತೆಂದೂ ಮತ್ತು ಅಂದಿನ ಹೊಯ್ಸಳ ದೊರೆ ಇಮ್ಮಡಿ ವೀರಬಲ್ಲಾಳನು ಇಲ್ಲಿ ಬೇಟೆಯಾಡಲು ಬಂದು, ಹೊತ್ತು ಮುಳುಗಿ, ಒಬ್ಬ ಮುದುಕಿಯ ಗುಡಿಸಿಲಲ್ಲಿ ಇದ್ದು, ಆಕೆ ಕೊಟ್ಟ ಬೆಂದ ಕಾಳುಗಳನ್ನು ತಿಂದ ಕಾರಣ, ಈ ಜಾಗಕ್ಕೆ ಬೆಂದಕಾಳೂರು ಎಂಬ ಹೆಸರು ಬಂದಿತು ಎಂಬುದು ಆ ಕತೆ. ಮುಂದೆ ಬೆಂದಕಾಳೂರು, ಬೆಂಗಳೂರು ಆಯಿತಂತೆ.

ಕೆಂಪೇಗೌಡ ೧೫೩೬ರಲ್ಲಿ ಬೆಂಗಳೂರು ಪಟ್ಟಣವನ್ನು ಕಟ್ಟಿಸಿದನಾದರೂ ಆ ಮೊದಲೇ ಬೆಂಗಳೂರೆಂಬ ಒಂದು ಸಣ್ಣ ಊರು ಇತ್ತೆಂಬುದು ಎಲ್ಲರಿಗೂ ತಿಳಿದಿರುವ ಮಾತೇ. ಹಾಗಿದ್ದರೆ ಆ ಸಣ್ಣ ಊರೇ ಬಲ್ಲಾಳನ ಬೆಂದಕಾಳೂರೇ (ಮೇಲಿನ ಕತೆಯನ್ನು ನಂಬುವುದಾದರೆ)? ಹಿಂದಿನ ದಿಟಗಳನ್ನು ಕಂಡು ಹಿಡಿಯುವಾಗ ಈ ರೀತಿಯ ಕತೆಗಳು ನಮಗೆ ಗಟ್ಟಿ ನೆಲೆಯನ್ನು ಕೊಡುವುದಿಲ್ಲ. ಗಟ್ಟಿ ನೆಲೆಯೆಂದರೆ ಆಗಿನ ಕಲ್ಬರಹ, ತಾಮ್ರ ಪಟದ ಬರಹ, ನಲ್ಬರಹ (ಸಾಹಿತ್ಯ) ಇವುಗಳು ಇನ್ನೂ ಹೆಚ್ಚು ನಂಬಲಾಗುವಂತಹ ಕುರುಹುಗಳನ್ನು ಕೊಡಬಹುದು. ಹಾಗಿದ್ದರೆ ೧೨ನೇ ನೂರ್ಮಾನದ ಸುತ್ತ ಮುತ್ತ, ಇಲ್ಲವೇ ಅದಕ್ಕೂ ಮೊದಲು 'ಬೆಂಗಳೂರು' ಇಲ್ಲವೆ ಅದನ್ನು ಹೋಲುವ ಊರಿನ ಹೆಸರು ಯಾವುದಾದರೂ ಬರಹಗಳಲ್ಲಿ ಕಂಡು ಬಂದಿದೆಯೇ ಎಂದು ನೋಡೋಣ.

ಎಲೆಕ್ಟ್ರಾನಿಕ್ ಸಿಟಿಯ ಬಳಿ, ಹೊಸೂರು ಬೀದಿಯಲ್ಲಿ ಬೇಗೂರು ಎಂಬ ಊರಿದೆ. ಅಲ್ಲಿ ಹಳೆಯ ನಾಗನಾತನ ಒಂದು ಗುಡಿಯಲ್ಲಿ ಒಂದು ವೀರಗಲ್ಲಿನ ಮೇಲೆ ಒಂದು ಕಲ್ಬರಹವಿದೆ. ಈ ಕಲ್ಬರಹದಲ್ಲಿ ಬೆಂಗಳೂರಿನ ಹೆಸರು ಬಂದಿದೆ: '...ಬೆಂಗಳೂರು ಕಾಳೆಗದೊಳ್ ಬುಟ್ಟಣ ಸೆಟ್ಟಿ ಸತ್ತಮ್...'. ಅಂದರೆ ಇದು ಬುಟ್ಟಣ ಸೆಟ್ಟಿಯೆಂಬ ಒಬ್ಬ ವೀರನ ಕತೆ ಹೇಳುವ ವೀರಗಲ್ಲು. ಅವನು ಬೆಂಗಳೂರಿನ ಕಾಳಗದಲ್ಲಿ ಹೋರಾಡಿ ಸತ್ತನಂತೆ. ಈ ವೀರಗಲ್ಲು ಸುಮಾರು ೯ನೇ ನೂರ್ಮಾನದ್ದು. ಹಾಗಿದ್ದ ಮೇಲೆ ಬೆಂಗಳೂರು ಎಂಬ ಊರು ೯ನೇ ನೂರ್ಮಾನದಲ್ಲಾಗಲೇ ಇದ್ದಿತೆಂದು ಹೇಳಬಹುದು ಮತ್ತು ವೀರಬಲ್ಲಾಳನ ಬೆಂದಕಾಳೂರಿನ ಕತೆ ದಿಟವಲ್ಲ ಎಂಬ ತೀರ್ಮಾನಕ್ಕೆ ಬರಬಹುದು!

ಆದರೆ ಬೆಂಗಳೂರು ಹೆಸರಿನ ಅರ್ತವೇನು, ಮೂಲವೇನು ಎಂಬ ಪ್ರಶ್ನೆಗೆ ನಮಗೆ ಇನ್ನೂ ಉತ್ತರ ದೊರಕಿಲ್ಲ. ಆದರೆ ಊಹೆಗಳನ್ನು ಮಾಡಬಹುದು. ೯-೧೦ ನೇ ನೂರ್ಮಾನದಲ್ಲಿ ಬೆಂಗಳೂರಿನ ಸುತ್ತ ಮುತ್ತಲಿನ ಪ್ರದೇಶ ಗಂಗ-ಚೋಳ ನಾಡುಗಳ ಗಡಿಯಾಗಿತ್ತು. ಹಾಗಾಗಿ ಗಂಗರು ಇಲ್ಲಿ ತಮ್ಮ ಬೆಂಗಾವಲು ಪಡೆಯನ್ನು  ನಿಲ್ಲಿಸಿದ್ದರೆಂಬುದಕ್ಕೆ ಸಾಕಶ್ಟು ಪುರಾವೆಗಳಿವೆ. ಬುಟ್ಟಣ ಸೆಟ್ಟಿಯು ಈ ಪಡೆಯಲ್ಲಿ ಒಬ್ಬ ಕಾದಾಳಾಗಿದ್ದಿರಬಹುದು. ಹಾಗಾಗಿ ಇದು ಮೊದಲು ಗಂಗರ 'ಬೆಂಗಾವಲೂರು' (garrison town) ಆಗಿದ್ದು ಮುಂದೆ ಇದೇ ಬೆಂಗಳೂರಾಗಿದೆ ಎಂದು ಕೆಲವರ ಅನಿಸಿಕೆ. 

ಒಲ್ಲದ ಪ್ರಾಣಾಯಾಮ

ಹಲವು ಕನ್ನಡಿಗರು, ಮಹಾಪ್ರಾಣ ಮತ್ತು ಹಕಾರಗಳು ಇಲ್ಲದ ಕಡೆ ಅವುಗಳನ್ನು ತೂರಿಸಿ, ತಪ್ಪು ತಪ್ಪಾಗಿ ತಪ್ಪಾಗಿ ಉಲಿಯುವುದನ್ನು ನಾವು ಗಮನಿಸಿರುತ್ತೇವೆ. ಎತ್ತುಗೆಗೆ 'ಹಾದರದ ಸ್ವಾಗತ', 'ಆರ್ಧಿಕ ಶುಭಾಶಯಗಳು', 'ಸರಿಯಾದ ಸಂಧರ್ಭ' ಇಂತಹ ತಪ್ಪುಗಳು ಸರ್ವೇ ಸಾಮಾನ್ಯ. ಇದನ್ನು ಹಲವರು ಲೇವಡಿ ಮಾಡಿರುವುದೂ ಉಂಟು ಮತ್ತು  ಕೆಲವರು ಕನ್ನಡಿಗರಿಗೆ ಕನ್ನಡ ಆಡುವುದೇ ಬರುವುದಿಲ್ಲ ಎಂದು ತೀರ್ಪು ಕೊಟ್ಟಿರುವುದೂ ಉಂಟು. ಇನ್ನು ನಮ್ಮಂತಹ ಕೆಲವು ಮಂದಿ, ಅವರು ಹಾಗೆ ಉಚ್ಚರಿಸಲು ಕಾರಣ, ಆಡುನುಡಿಯಲ್ಲಿರದ ಸಕ್ಕದದ ಮತ್ತು ಕೆಲವು ಪಾಗದದ ರೂಪಗಳನ್ನು ಮೂಲದಲ್ಲಿರುವಂತೆಯೇ ಉಲಿಯುವ ಒತ್ತಡ ಅವರ ಈ ತಪ್ಪುಗಳಿಗೆ ಕಾರಣ ಎಂದು ಅವರ ಪರವಾಗಿ ನಿಂತೂ ಇದ್ದೇವೆ.  ಇದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದು ಹೋಗಿವೆ, ಹಾಗಾಗಿ ಇಲ್ಲಿ ಮತ್ತೆ ಅದೇ ವಿಶಯವನ್ನು ಹೆಕ್ಕಿ ತೆಗೆದು ಚರ್ಚೆ ಮಾಡುವುದಿಲ್ಲ. ಬದಲಾಗಿ ನನ್ನ ಒಂದು ಗಮನಿಕೆ ಹೇಳುತ್ತೇನೆ.

ಈ ತೆರನಾದ ಸಕ್ಕದದ ಪ್ರಬಾವ ನಮ್ಮ ನುಡಿಯ ಮೇಲೆ ಎಶ್ಟಾಗಿದೆ ಅಂದರೆ ಹಲವು ಅಚ್ಚ ಕನ್ನಡದ ಪದಗಳಲ್ಲೇ ಈ ಮಹಾಪ್ರಾಣ ಹಕಾರಗಳು ಹೊಕ್ಕು ಇಂದು ಅವು ಬರಹದಲ್ಲೂ ಒಪ್ಪಿಗೆ ಪಡೆದುಕೊಂಡು ಬಿಟ್ಟಿವೆ. ಕೆಳಗೆ ಕೆಲವು ಎತ್ತುಗೆಗಳನ್ನು ಕೊಟ್ಟಿದ್ದೇನೆ. ಈ ಎತ್ತುಗೆಗಳಲ್ಲಿ ಅಚ್ಚಗನ್ನಡದ ಪದಗಳ ಜೊತೆಯಲ್ಲಿ ಕನ್ನಡಕ್ಕೆ ತೀರಾ ಒಗ್ಗಿ ಕನ್ನಡ ಪದಗಳಂತೆ ಕಾಣುವ ತದ್ಬವಗಳೂ ಕೆಲವೊಂದಿವೆ.

ಘಮ - ಗಮ; ಕಮ್, ಕಂಪು ಮುಂತಾದ ಪದಗಳಿಗೆ ನಂಟಿರುವ ಇದು ಗಮ ಇಂದ ಘಮ ಆಗಿದೆ.
ಭತ್ತ - ಬತ್ತ; ಪಾಗದ 'ಭಾತ್' ಜೊತೆ ನಂಟಿದ್ದರೂ ಕನ್ನಡದ ರೂಪ 'ಬತ್ತ' ಎಂದೇ. ಆದರೂ ಇದು ಇಂದು 'ಭತ್ತ' ಆಗಿದೆ.
ಒಂಭತ್ತು  -  ಮಾತಾಡುವಾಗ 'ಒಂಬತ್ತು' ಎಂದೇ ಉಲಿದರೂ ಅದೇಕೋ ಹಲವರಿಗೆ 'ಒಂಭತ್ತು' ಎಂಬುದೇ ಸರಿಯಾದ ರೂಪ ಎಂದೆನಿಸುತ್ತದೆ.
ಹರಿಶಿನ - ಅರಿಶಿನ, ಅರಿಸಿನ ಎಂಬುದನ್ನ ಕೆಲವೊಮ್ಮೆ ಹೀಗೆ ಉಲಿಯುವುದು ಉಂಟು. 'ದ್ರಾವಿಡಿಯನ್ ಎಟಿಮಾಲಜಿಕಲ್ ಡಿಕ್ಶನರಿ'ಯಲ್ಲಿ ಇದು ಕನ್ನಡ ಮೂಲದ ಪದವೆಂದೇ ಹೇಳಲಾಗಿದೆ ಮತ್ತು ಅದರೊಂದಿಗೆ ಯಾವುದೇ ಸಕ್ಕದ/ ಪಾಗದದ ನಂಟು ಕೊಟ್ಟಿಲ್ಲ. ಆದರೆ ಕೊಳಂಬೆಯವರ ಪದನೆರಕೆಯಲ್ಲಿ ಇದರ ಮೂಲ ಸಕ್ಕದದ 'ಹರಿದ್ರೆ' ಎಂದು ಹೇಳಲಾಗಿದೆ. ಅದೇನೇ ಇರಲಿ ಕನ್ನಡದಲ್ಲಿ ಇದು ಯಾವತ್ತೂ ಅರಿಶಿನ/ ಅರಿಸಿನವೇ ಆಗಿತ್ತು. ಮೇಲಿನ 'ಒಂಭತ್ತು' ಎತ್ತುಗೆಯಲ್ಲಿ ಹೇಳಿದಂತೆ ಇದು ತಪ್ಪು ತಿಳಿವಳಿಕೆಯಿಂದ ಆದುದು.
ಖಾರ/ ಘಾಟು - ಕಾರ/ ಗಾಟು ಎಂದು ಹೇಳಿದರೂ ಬರೆಯುವಾಗ ಖಾರ/ ಘಾಟು ಎಂದೇ ಬರೆಯುತ್ತೇವೆ.
 ಗಲಭೆ - ಗಲಬೆ, ಭಾವಿ - ಬಾವಿ, ಭಾವ - ಬಾವ (ಇದು ಸಕ್ಕದದ ಮೂಲವೇ ಆದರೂ ಮೇಲೆ ಹೇಳಿದಂತೆ ಕನ್ನಡಕ್ಕೆ ಒಗ್ಗಿ ಹೋಗಿರುವ ಪದ), ಹೀಗೆ ಇನ್ನೂ ಹಲವು ಎತ್ತುಗೆಗಳನ್ನು ಕೊಡಬಹುದು.



ಬುಧವಾರ, ಜನವರಿ 16, 2013

ಹಟ್ಟಿಯ ಹಬ್ಬ



ವಾಡಿ, ವಾಡ, ವಾಡೆ ಇಂದ ಕೊನೆಗೊಳ್ಳುವ ಹಲವು ಎಡೆಗಳ ಹೆಸರುಗಳನ್ನು ಇಂದು ಬಡಗಣ(ಉತ್ತರ)ದ ನಾಡುಗಳಲ್ಲಿ ಕಾಣಬಹುದು. ಎತ್ತುಗೆಗೆ ಇಲ್ಲಿ ಕೆಲವು ಹೆಸರುಗಳನ್ನು ಕೊಟ್ಟಿದ್ದೇನೆ:

ಮಹಾರಾಶ್ಟ್ರ: ಯೇರವಾಡ, ಹಿಂಜಾವಾಡಿ, ಕಲ್ವಾಡಿ, ಜಾದವವಾಡಿ, ನಾಗೇವಾಡಿ, ಮಾರಾಟವಾಡ   
ಗುಜರಾತ: ಕೇರ್ವಾಡ, ನಾಸವಾಡಿ, ಬೋರಾತ್ವಾಡ 
ದಂತೇವಾಡ   (ಚತ್ತೀಸ್ ಗಡ), ಬಾಸ್ವಾಡ (ರಾಜಾಸ್ತಾನ), ಬೀಲ್ವಾಡ  (ರಾಜಾಸ್ತಾನ)

ನಮಗೆ ಹತ್ತಿರದ ಮಹಾರಾಶ್ಟ್ರದಲ್ಲಿ ಹೇರಳವಾಗಿ ಕಾಣಸಿಗುವ ಈ ಹೆಸರುಗಳು, ಗುಜರಾತಿನಲ್ಲಿ ಕೊಂಚ ಕಡಿಮೆಯಾಗಿ, ಬಡಗದ ರಾಜಸ್ತಾನದಲ್ಲಿ ಇನ್ನೂ ವಿರಳವಾಗಿ, ಪಂಜಾಬಲ್ಲಿ ಮಾಯವಾಗುತ್ತವೆ. ಹಲವು ಅರಿಗರು, ತಿಳಿವಿಗರು ಇದು ಸಕ್ಕದ (ಸಂಸ್ಕ್ರುತ) ಮೂಲದ ವಾಟಿಕೆ ಎಂಬ ಪದವು ಪಾಗದಕ್ಕೆ (ಪ್ರಾಕ್ರುತ) ಬಂದು ವಾಟ, ವಾಡ, ವಾಡಿ ಆಗಿದೆ ಎನ್ನುತ್ತಾರೆ. ಇದಲ್ಲದೆ ಇದೇ ರೂಪಗಳು ತೆಂಕಣ ನಾಡುಗಳಿಗೂ ಹಬ್ಬಿ 'ವಾಡ', 'ವಾಡಿ', 'ಪಾಡಿ', 'ಬಾಡಿ' ಇಂದ ಕೊನೆಗೊಳ್ಳುವ ಊರುಗಳು ಹುಟ್ಟಿಕೊಂಡವಂತೆ. ಸಕ್ಕದದಲ್ಲಿ ವಾಟಿಕೆ ಎಂದರೆ ಮರಗಳ ಗುಂಪು ಎಂಬ ಹುರುಳಿದೆ. ಹಾಗಾಗಿ ಮರಗಳ ಗುಂಪುಗಳ/ ತೋಪುಗಳ ಬಳಿ ತಲೆಯೆತ್ತಿದ ಊರುಗಳಿಗೆ ಈ ಹೆಸರು ಬಂದಿರಬಹುದೆಂಬುದು ಇವರುಗಳ ಅನಿಸಿಕೆ. 

ಆದರೆ ಈ ಪದಹುಟ್ಟು ವಿವರಣೆಯು ಸರಿಯಲ್ಲವೆಂದು ಇನ್ನಿತರೇ ಕೆಲವು ವಿಶಯಗಳನ್ನು ಗಮನಿಸಿದಾಗ ತಿಳಿಯುತ್ತದೆ. ತೆಂಕಣ(ದಕ್ಶಿಣ)ದ ನಾಡುಗಳಲ್ಲಿ ಈ ಪರಿಯ ಹೆಸರುಗಳು ಬೇಕಾದಶ್ಟು ಸಿಗುತ್ತದೆ. ಎತ್ತುಗೆಗೆ ದಾರವಾಡ, ಸಾರವಾಡ (ವಿಜಾಪುರ), ಗಾವರವಾಡ, ಕಾಸ್ಪಾಡಿ (ಸಾಗಾರ), ಕನ್ನಂಬಾಡಿ, ವಿಜಯವಾಡ (ಆಂದ್ರ), ಕಾಟ್ಪಾಡಿ (ತಮಿಳುನಾಡು). ನಮ್ಮ ಬೆಂಗಳೂರಿನಲ್ಲೇ ಬಾಣಸವಾಡಿ ಎಂಬ ಕೇರಿಯಿದೆ. ಇನ್ನು ಬಡಗದ ನಾಡುಗಳಲ್ಲಿ ಮಹಾರಾಶ್ಟ್ರ, ಗುಜರಾತಗಳಲ್ಲಿ  ಬಿಟ್ಟರೆ ಅಲ್ಲೊಂದು  ಇಲ್ಲೊಂದು ಎಂಬಂತೆ ಕೆಲವೇ ಕೆಲವು ಎತ್ತುಗೆಗಳು ಸಿಗುತ್ತವೆ. ಇನ್ನು ಇತರೆ ಆರ್ಯರ ನಾಡುಗಳಾದ ಇರಾನ್, ಯುರೋಪುಗಳಲ್ಲಂತೂ ಈ ತೆರನಾದ ಹೆಸರುಗಳು ಇಲ್ಲವೇ ಇಲ್ಲ. ಮತ್ತು ಮೇಲೆ ಹೇಳಿದ ಮಹಾರಾಶ್ಟ್ರ, ಗುಜರಾತಗಳು ಮೊದಲು ದ್ರಾವಿಡದ, ಅದರಲ್ಲೂ ಕನ್ನಡದ ನಾಡುಗಳೇ ಆಗಿದ್ದುವೆಂಬುದು ಗೊತ್ತಿರುವ ಸಂಗತಿಯೇ. ಹಾಗಾಗಿ, ಈ ಹೆಸರುಗಳು ದ್ರಾವಿಡ ಮೂಲದ್ದೇ ಇರಬಹುದೆನ್ನಬಹುದು.  ಶಂ.ಬಾ ಜೋಶಿಗಳ ಪ್ರಕಾರ ಇದನ್ನು ಸಕ್ಕದದ 'ವಾಟಿಕಾ' ಪದಕ್ಕೆ ಹೊಂದಿಸುವುದಕ್ಕಿಂತ ದ್ರಾವಿಡದ 'ಪಟ್ಟಿ' ( ಹೊಸಗನ್ನಡ: ಹಟ್ಟಿ) ಪದಕ್ಕೆ ಹೊಂದಿಸುವುದೇ ಸೂಕ್ತ.

ಮಾನವನು ಅಲೆಮಾರಿ ಬದುಕನ್ನು ಬಿಟ್ಟು, ಒಕ್ಕಲುತನ, ಪ್ರಾಣಿ ಸಾಕಣಿಕೆ ಕಲಿತು ಮೊದಲು ಊರುಗಳಲ್ಲಿ ನೆಲೆ ನಿಂತಾಗ ಹಟ್ಟಿಗಳನ್ನು ಕಟ್ಟಿಕೊಂಡನು. ದನ, ಎಮ್ಮೆ ಕುರಿಗಳ ಸಕಣಿಕೆಯಿಂದ ತನ್ನ ಬದುಕಿನ ಹಾದಿಯನ್ನು ಕಂಡುಕೊಂಡನು. ಮೂಲ ಕನ್ನಡ ಜನಾಂಗದವರು ಇಂತಹ ಕುರುಬ/ ಹಾಲು ಮತದವರಾಗಿದ್ದು ಹಲವು ಕಡೆಗಳಲ್ಲಿ 'ಪಟ್ಟಿ'ಗಳನ್ನು ಕಟ್ಟಿಕೊಂಡರು. ಪಾಡಿ, ಬಾಡಿ, ಹಟ್ಟಿ, ವಾಡಿ, ವಾಡ - ಇವೆಲ್ಲವೂ ಇದೇ 'ಪಟ್ಟಿ' ಪದದ ಬೇರೆ ಬೇರೆ ರೂಪಗಳು. ಇಂದಿನ ದ್ರಾವಿಡ ನಾಡುಗಳಲ್ಲದೇ ಹಿಂದೆ ದ್ರಾವಿಡ ಸೀಮೆಗೇ ಸೇರಿದ ನಾಡುಗಳಲ್ಲೂ ಈ ಹೆಸರುಗಳು ಉಳಿದುಕೊಂಡಿವೆ. 'ಮರಾಟಿ'ಯೆಂಬುದಕ್ಕೆ ಕೂಡ 'ಮರ ಹಟ್ಟಿ' ಎಂಬ ಕನ್ನಡ ಮೂಲವಿದೆ. ಮರಾಟಿಯ ಕೆಲವು ಹಳೆಯ ಕ್ರುತಿಗಳಲ್ಲಿಯೇ 'ಮರ್ಹಾಟಿ' ಎಂಬ ಬಳಕೆಯನ್ನು ಕಾಣಬಹುದು. 'ಮಹಾರಾಶ್ಟ್ರ' ಎಂಬುದು ಬಳಿಕ ಆದ 'ಮರಹಟ್ಟಿ' ಪದದ ಸಕ್ಕದಿಸಿಕೆ (ಸಂಸ್ಕೃತೀಕರಣ).

ಈ ಬರಹವನ್ನು ಮುಗಿಸುವ ಮೊದಲು ಇನ್ನೊಂದು ವಿಶಯ ಹೇಳಲು ಬಯಸುವೆ. ಸಾಹಿತ್ಯ ಪರಿಶತ್ತಿನ ಪದನೆರಕೆಯಲ್ಲಿ 'ಹಟ್ಟಿಯ ಹಬ್ಬ' ಎಂಬ ಪದವನ್ನು ಕಂಡೆ. ಇದಕ್ಕೆ 'ದೀಪಾವಳಿ ಹಬ್ಬ' ಎಂಬ ಹುರುಳು ಕೊಡಲಾಗಿದೆ. ಇದರ ಬಗ್ಗೆ ಶಂ.ಬಾ ಜೋಶಿಯವರು ಕೂಡ ತಮ್ಮ 'ಕರ್ನಾಟಕದ ವೀರಕ್ಶತ್ರಿಯರು' ಎಂಬ ಹೊತ್ತಗೆಯಲ್ಲಿ ಹೇಳಿದ್ದಾರೆ. ನಮ್ಮ ನಾಡಿನ ಎಶ್ಟೋ ಹಳ್ಳಿಗಳಲ್ಲಿ ಇಂದಿಗೂ ಇದನ್ನು ಹಟ್ಟೀ ಹಬ್ಬ ಎಂದೇ ಕರೆಯುತ್ತಾರೆ.  ಮೂಲವಾಗಿ ದೀಪಾವಳಿಯು ನಮ್ಮ ನಾಡ ಮಂದಿಯಾದ ಹಟ್ಟಿಕಾರರ ಹಬ್ಬ. ಇದು ಸೊಡರು ಹಬ್ಬ - ದೀಪಗಳ ಹಬ್ಬವಾಗಿ ಕೊಂಡಾಡುವ ಮೊದಲು ಹಟ್ಟಿಯ ದನಗಳ ಹಬ್ಬವಾಗಿತ್ತೆಂದು ತೋರುತ್ತದೆ.

ಶನಿವಾರ, ಡಿಸೆಂಬರ್ 1, 2012

ನಿಕಾರಾಗುವದ ಒಂದು ಎತ್ತುಗೆ




ಚಿತ್ರ: ಗೂಗಲ್ಲಿಂದ


ನಿಕಾರಾಗುವದಲ್ಲಿ ೭೦-೮೦ರಲ್ಲಿ ಆದ ಒಂದು ಬೆಳವಣಿಗೆಯ ಬಗ್ಗೆ ಹೇಳುತ್ತೇನೆ. ೭೦ರ ಹೊತ್ತಲ್ಲಿ ಅಲ್ಲಿ ಕಿವುಡು-ಮೂಗು ಮಕ್ಕಳಿಗಾಗಿ ಶಾಲೆಯೊಂದು  ತೆರೆಯಲಾಯಿತು. ಇದಕ್ಕೂ ಮೊದಲು ಇಂತಹ ಮಕ್ಕಗಳಿಗೆಂದು ಶಾಲೆಗಳು ಇರಲಿಲ್ಲ. ಅಲ್ಲಿ ಅವರುಗಳಿಗೆ ಸ್ಪ್ಯಾನಿಶ್ ನುಡಿಯನ್ನೂ ಮತ್ತು ತುಟಿಯೋದುವುದನ್ನೂ (lip reading) ಕಲಿಸಲಾಗುತ್ತಿತ್ತು. ಆದರೆ ಹತ್ತು-ಹನ್ನೆರಡು ವರ್ಶಗಳಾದರೂ ಅಲ್ಲಿನ ಮಕ್ಕಳು ಸ್ಪ್ಯಾನಿಶ್ ನುಡಿಯನ್ನು ಸರಿಯಾಗಿ ಕಲಿಯಲೇ ಇಲ್ಲ. ಅಲ್ಲಿನ ಕಲಿಸುವವರು ಈ ಮಕ್ಕಳಿಗೆ ಕಲಿಸಲು ಆಗುವುದಿಲ್ಲವೆಂದು ಕಯ್ ಚೆಲ್ಲಿ ಕೂತರು. ಅದಲ್ಲದೇ ಈ ಮಕ್ಕಳು ತಮ್ಮ ತಮ್ಮಲ್ಲೇ ಸಯ್ಗೆಗಳೊಂದಿಗೆ ಮಾತಾಡಿಕೊಳ್ಳುತ್ತಿದ್ದರು. ಇದೇನೋ ಕೆಲಸಕ್ಕೆ ಬಾರದ ಮೂಗರ ಸಯ್ಗೆಗಳೆಂದು ಮೊದಲಿಗೆ ಅಸಡ್ಡೆ ತೋರಿದ ಕಲಿಸುಗರು, ಮಕ್ಕಳಿಗೆ ಕಲಿಸಲೂ ಆಗದೇ ತಮ್ಮ ತಮ್ಮಲ್ಲೇ ಅದೇನು ಮಾತಾಡಿಕೊಳ್ಳುತ್ತಿದ್ದಾರೆಂಬುದನ್ನು ತಿಳಿಯಲೂ ಆಗದೆ ಅಮೇರಿಕಾದ ಯುನಿವರ್ಸಿಟಿಗಳಿಂದ ನೆರವು ಕೋರಿದರು.

ಅಮೆರಿಕಾದಿಂದ ಬಂದ ನುಡಿಯರಿಗರು (linguists) ಮಕ್ಕಳ ಸಯ್ಗೆಗಳನ್ನು ಗಮಿನಿಸ ತೊಡಗಿದರು ಮತ್ತು ಅದರ ಬಗ್ಗೆ ಆರಯ್ಕೆ (research) ನಡೆಸಿದರು. ಆ ಶಾಲೆಯ ದೊಡ್ಡ ಮಕ್ಕಳ (೧೧-೧೫ ವಯಸ್ಸಿನವರು) ಸಯ್ಗೆಗಳನ್ನ ಗಮನಿಸಿದ ತಂಡ ಬೆರಗಾಯಿತು. ಈ ಮಕ್ಕಳು ತಮ್ಮೊಂದಿಗೆ ಸಯ್ಗೆಗಳ  ಮೂಲಕ ಮಾತಾಡಿಕೊಂಡು ತಮ್ಮದೇ ಆದ ನುಡಿಯನ್ನು ಮಾಡಿಕೊಂಡು ಬಿಟ್ಟಿದ್ದರು! ಆದರೆ ಈ ನುಡಿಯು ಅರೆ-ಬರೆ ನುಡಿಯಾಗಿತ್ತು, ಪಿಜಿನ್ ಎಂದು ಹೇಳಬಹುದಿತ್ತು ಅಶ್ಟೆ. ಆದರೂ ಬರೀ ೧೦-೧೫ ವರ್ಶಗಳಲ್ಲಿ ಮಕ್ಕಳು ತಾವಾಗೆ ಇಂತಹ ಒಂದು ನುಡಿಯನ್ನು ಮಾಡಿಕೊಂಡಿದ್ದರು ಎಂದರೆ ಏನಾಶ್ಚರ್ಯ ಅಲ್ಲವೇ? ಆದರೆ ಇನ್ನೂ ಚಿಕ್ಕ ಮಕ್ಕಳ ಸಯ್ಗೆಗಳನ್ನು ಆರಯ್ಯಲು ಹೊರಟ ಈ ತಂಡಕ್ಕೆ ಮತ್ತೊಂದು ದೊಡ್ಡ ಆಶ್ಚರ್ಯ ಕಾದಿತ್ತು.

ಈ ಚಿಕ್ಕ ಮಕ್ಕಳು ದೊಡ್ಡ ಮಕ್ಕಳಿಂದ ಕಲಿತ ನುಡಿಯನ್ನು ಮುಂದುವರೆಸಿ ಅದನ್ನು ಒಂದು ತುಂಬು ನುಡಿಯನ್ನಾಗಿಸಿದ್ದರು. ಎಶ್ಟರ ಮಟ್ಟಿಗೆ ಎಂದು ಕೇಳುತ್ತೀರಾ? ಸಾವಿರ್ರಾರು ವರ್ಶಗಳಿಂದ ಬೆಳೆದು ಬಂದ ನುಡಿಗಳಲ್ಲಿ ಕಾಣುವ ಸೊಲ್ಲಿರಿಮೆಯ (ವ್ಯಾಕರಣ) ಸಂಕೀರ್ಣತೆ ಈ ಪುಟ್ಟ ಮಕ್ಕಳ ಸಯ್ಗೆಯ ನುಡಿಯ ಸೊಲ್ಲರಿಮೆಯಲ್ಲೂ ಕಂಡಿತು! ಈ ಕಂಡುಹಿಡಿತವು ಪ್ರಪಂಚದ ಎಲ್ಲ ನುಡಿಯರಿಗರನ್ನು ಬೆರಗುಗೊಳಿಸಿತ್ತು.  ನುಡಿಯ ಹುಟ್ಟು ಮತ್ತು ಬೆಳವಣಿಗೆಯ ಬಗ್ಗೆ, ಅರಿಮೆಯ ಸಮುದಾಯದಲ್ಲೇ (ಸೈಂಟಿಫಿಕ್ ಕಮ್ಯೂನಿಟಿ), ಅಂದಿನವರೆಗೂ ಇದ್ದ ಎಶ್ಟೋ ನಂಬಿಕೆಗಳು ಬಿದ್ದು ಹೋದವು.

ಇದರಿಂದ ನಾವೇನು ತಿಳಿಯಬಹುದು? ಮನುಶ್ಯನಿಗೆ ತನ್ನ ಒಡನಾಡಿಗಳೊಂದಿಗೆ ಒಡನಾಡಲು, ಮಾತಾಡಲು ಬೇಕಾಗುವ ನುಡಿಯ ಸೊಲ್ಲರಿಮೆಯೆಂಬುದು ಹುಟ್ಟು ಗುಣ. ಆ ಸೊಲ್ಲರಿಮೆ ಅವನ ಮೆದುಳಿನಲ್ಲಿ ಹುಟ್ಟುವಾಗಲೇ ಇರುತ್ತದೆ. ಚಿಕ್ಕ ಮಗುವೊಂದು ತನ್ನ ತಾಯಿ ತಂದೆ, ಇನ್ನಿತರ ನಂಟರು ಮಾತಾಡುವುದನ್ನು ನೋಡಿ ಅವರ ನುಡಿಯ ಸೊಲ್ಲರಿಮೆಯನ್ನು ತಿಳಿದು ತನ್ನ ಮೆದುಳಿನಲ್ಲಿರುವ ಸೊಲ್ಲರಿಮೆಗೆ ಹೊಂದಿಸಿಕೊಳ್ಳುತ್ತದೆ. ಹೀಗೆ ತನ್ನ ತಾಯ್ನುಡಿಯನ್ನು ಕಲಿಯುತ್ತದೆ. ಅಶ್ಟೇ ಅಲ್ಲದೆ, ನುಡಿಯೊಂದು ಕಿವಿಗೆ ಬೀಳದಿದ್ದಲ್ಲಿ ತನ್ನದೇ ಹೊಸ ನುಡಿಯೊಂದನ್ನು ಕಟ್ಟುವ ಕಸುವು ಕೂಡ ಒಂದು ಪುಟ್ಟ ಮಗುವಿಗೆ ಇರುತ್ತದೆ. ಇದಕ್ಕೆ ಕಾರಣ, ಮೇಲೆ ಹೇಳಿದಂತೆ, ಮನುಶ್ಯನ ಮೆದುಳಲ್ಲಿ ಹುಟ್ಟಿನಿಂದಲೇ ಬರುವ ಸೊಲ್ಲರಿಮೆ. 

ಆದರೆ ಇದರ ವಿಚಾರವಾಗಿ ಇಂದಿಗೂ ನಮ್ಮಲ್ಲಿ ಹಲವು ತಪ್ಪು ನಂಬಿಕೆಗಳಿವೆ. ಬಯ್ಬಲ್ಲಿನಲ್ಲಿ ಮೊದಲು ಒಂದೇ ನುಡಿಯಿದ್ದು ಆಮೇಲೆ ಅಲ್ಲಿಂದ ಎಲ್ಲಾ ನುಡಿಗಳು ಹುಟ್ಟಿಕೊಂಡವು (ಬೇಬಲ್ ಟವರ್ ಕತೆ) ಎಂದು ಹೇಳಲಾಗಿದೆ. ನಮ್ಮ ದೇಶದಲ್ಲಿ ಸಕ್ಕದವೇ ಎಲ್ಲ ನುಡಿಗಳಿಗೂ ಮೂಲ ಎಂಬ ನಂಬಿಕೆಯೂ ಇದೆ. ಹಾಗೆಯೇ ದ್ರಾವಿಡ ಚಳುವಳಿಯ ಕೆಲವು ಪಂಡಿತರುಗಳು, ಸಕ್ಕದ ಪಂಡಿತರುಗಳನ್ನು ನೋಡಿಕೊಂಡು, ತಾವೇನು ಕಮ್ಮಿ ಎಂದು, ತಮಿಳೇ ಎಲ್ಲ ನುಡಿಗಳ ಮೂಲ ಎಂದು ವಾದಿಸಿದ್ದೂ ಇದೆ. ಈ ನಿಲುವುಗಳನ್ನು, ನಂಬಿಕೆಗಳನ್ನು ಆಳವಾಗಿ ನಂಬುವವರು ತುಂಬಾ ಮಂದಿಯುಂಟು. ಆದರೆ ನಿಜಕ್ಕೂ ನುಡಿಯ ಮೂಲ ಇರುವುದು ಮನುಶ್ಯನ ಮೆದುಳಲ್ಲಿ. ಹುಟ್ಟಿದ ಕರುವಿಗೆ ತಾಯಿಯ ಕೆಚ್ಚಲಿಂದ ಹಾಲು ಕುಡಿಯುವುದು ಹೇಳಿಕೊಡಬೇಕಾಗಿಲ್ಲ. ಹಾಗೇ ಮನುಶ್ಯನಿಗೆ ನುಡಿಯ ಸೊಲ್ಲರಿಮೆ ಹೇಳಿಕೊಡ ಬೇಕಾಗಿಲ್ಲ. ತನ್ನ ಪರಿಸರದ ಸದ್ದುಗಳನ್ನು ಕೇಳಿ ಅದನ್ನು ಬಳಸಿಕೊಂಡು ನುಡಿಯನ್ನು ಕಟ್ಟುವ ಕಸುವು ಮನುಶ್ಯನಲ್ಲೇ ಇರುತ್ತದೆ. ಸದ್ದುಗಳನ್ನು ಕೇಳಲಾಗದ ಕಿವುಡನಾಗಿದ್ದರೆ ಸಯ್ಗೆಗಳೇ ಸಾಕು. ದೇವರು ಕೊಟ್ಟ ನುಡಿಯೋ, ಇಲ್ಲ ಬೇರೆ ಇನ್ನಾವುದೋ ಮೂಲ ನುಡಿ ಇರಲೇ ಬೇಕೆಂದೇನೂ ಇಲ್ಲ.
 

ಶನಿವಾರ, ಅಕ್ಟೋಬರ್ 27, 2012

ಚಿಮೂ ಅವರ ವಾದಕ್ಕೆ ಎದುರು ವಾದ

ಚಿದಾನಂದಮೂರ್ತಿಗಳ 'ಕನ್ನಡ ಲಿಪಿ ಸಂಸ್ಕರಣೆ ಅನಗತ್ಯ ಮತ್ತು ಅಸಾದ್ಯ' ಎಂಬ ತಲೆಬರಹದಲ್ಲಿ ಜೂನಿನಲ್ಲಿ ವಿ.ಕ ದಲ್ಲಿ ಒಂದು ಬರಹ ಬಂದಿತ್ತು. ಅದರ ಎದುರಾಗಿ ಈಗಾಗಲೇ ಬರತ್ ಅವರು ಬ್ಲಾಗಿದ್ದಾರೆ. ತಡವಾದರೂ ಸರಿ ನನ್ನ ಅನಿಸಿಕೆ ಈಗ ಹೇಳುತ್ತಿರುವೆ:



ಚಿದಾನಂದಮೂರ್ತಿಗಳು ತಮ್ಮ ಬರಹದಲ್ಲಿ ಮೊದಲನೆಯದಾಗಿ ಇಂಗ್ಲೀಶ್ ಲಿಪಿ ಸುದಾರಣೆಯ ಪ್ರಯತ್ನಗಳ ಉದಾಹರಣೆಯನ್ನು ನೀಡಿದ್ದಾರೆ. ಬೇರೆ ನುಡಿಯಿಂದ ಪದ ಪಡೆಯುವಾಗ ಅದರ ಸ್ಪೆಲ್ಲಿಂಗನ್ನು ತಮ್ಮ ನುಡಿಗೆ ಹೊಂದಿಸದೆ ಆ ನುಡಿಯ ಸ್ಪೆಲ್ಲಿಂಗನ್ನೇ ಉಳಿಸಿಕೊಳ್ಳಬೇಕೆಂಬ ಕಟ್ಟಲೆ ಇಂಗ್ಲೀಶಲ್ಲಿದೆ. ಇದರಿಂದ ಪ್ರೆಂಚ್, ಜರ್ಮನ್, ಲ್ಯಾಟಿನ್, ಪೋಲಿಶ್ ಮುಂತಾದ ಹಲವು ನುಡಿಗಳಿಂದ ಬಂದ ಸ್ಪೆಲ್ಲಿಂಗುಗಳು ಇಂಗ್ಲೀಶಲ್ಲಿ ಹಾಗೆಯೇ ಉಳಿದಿವೆ. ಒಂದೇ ಬಗೆಯ ಉಚ್ಚಾರವಿದ್ದರೂ ಪದಗಳು ಯಾವ ಮೂಲದ್ದು ಎಂಬುದರ ಮೇಲೆ ಸ್ಪೆಲ್ಲಿಂಗ್ ಬೇರೆಯಾಗುತ್ತದೆ. ಮೊದಲು ಹೆಚ್ಚು ಕಡಿಮೆ ಎಲ್ಲ ಯೂರೋಪಿನ ನುಡಿಗಳಿಂದ ಪದಗಳನ್ನು ಪಡೆದು ತೀರಾ ಸಂಕೀರ್ಣವಾದ ಸ್ಪೆಲ್ಲಿಂಗ್ ತೊಡಕುಗಳನ್ನು ಹೊಂದಿದ್ದ ಇಂಗ್ಲೀಶಲ್ಲಿ ಈಗ ಜಗತ್ತಿನ ಸುಮಾರು ಎಲ್ಲ ನುಡಿಗಳಿಂದ ಪದಗಳು ಸೇರಿಕೊಂಡು ಸರಿ ಪಡಿಸಲಾಗದಶ್ಟು ಸಮಸ್ಯೆಗಳು ಮೂಡಿವೆ. ಉದಾಹರಣೆಗೆ 'ಊ' ಎಂಬ ಉಲಿಯನ್ನು oo, u, u-e, ui, ue, o, oe, o-e, o-b, ou, ough, ew (f'oo'd, tr'u'th, r'ude', fr'ui't, bl'ue', t'o', sh'oe', m'ove', t'omb', gr'ou'p, thr'ough', fl'ew') ಎಂದು ಹನ್ನೆರಡು ಬಗೆಯಲ್ಲಿ ಬರೆಯಬಹುದಲ್ಲದೆ ಇದೇ ಸ್ಪೆಲ್ಲಿಂಗುಗಳು ಬೇರೆ ಪದಗಳಲ್ಲಿ ಬಂದಾಗ ಅವು ಬೇರೆ ಉಚ್ಚಾರಗಳನ್ನು ಪಡೆಯಬಹುದಾಗಿರುತ್ತವೆ (fl'oo'd, r'u'b, b'ui'ld, g'o', t'oe', dr'ove', c'om'b, 'ou't, r'ough', s'ew' - ಮೂಲ: ವಿಕಿಪೀಡಿಯ)

ಹೀಗಾಗಿ ಇಂಗ್ಲೀಶಿನ ಲಿಪಿ ಸುದಾರಣೆಗೆ ಮುಕ್ಯವಾಗಿ ಅಡ್ಡವಾಗಿರುವುದು ಇಂತಹ ಸಂಕೀರ್ಣ ಸ್ಪೆಲ್ಲಿಂಗ್ ಪದ್ದತಿಯನ್ನು ಕಲಿತವರು ಅದನ್ನು ಮರೆತು (unlearn) ಹೊಸ ಸುದಾರಿಸಿದ ಲಿಪಿಯನ್ನು ಕಲಿಯುವುದೇ ಆಗಿದೆ. ಆದರೆ ಕನ್ನಡದ ವಿಶಯವಾಗಿ ಸಂಸ್ಕ್ರುತ ಪದಗಳನ್ನು ಬಿಟ್ಟರೆ ಬೇರೆ ನುಡಿಗಳಿಂದ ಬಂದ ಪದಗಳಿಗೆ ಆ ನುಡಿಯಲ್ಲಿ ಬರೆದಂತೆಯೇ ಬರೆಯ ಬೇಕೆಂಬ ಕಟ್ಟಲೆಯಿಲ್ಲ. ಕನ್ನಡದ ಲಿಪಿ phonetic ಆಗಿರುವುದರಿಂದ ಸಂಸ್ಕ್ರುತ ಪದಗಳನ್ನು ಸಂಸ್ಕ್ರುತದಲ್ಲಿದ್ದ ಹಾಗೆಯೇ ಬರೆಯುವುದಕ್ಕಿಂತ ಕನ್ನಡದಲ್ಲಿ ಉಲಿಯುವಂತೆ ಬರೆಯುವುದೇ ಇನ್ನೂ ಸುಲಬ. ಹಾಗಾಗಿ ಶಂಕರ ಬಟ್ಟರು ಹೇಳಿರುವ ಲಿಪಿ ಸುದಾರಣೆ ಕನ್ನಡ ಬರಹವನ್ನು ಸುಲಬವಾಗಿಸುತ್ತದೆ ಮತ್ತು ಇಂಗ್ಲೀಶಿನಲ್ಲಾಗುವಂತೆ ಹೊಸ ಸಮಸ್ಯೆಗಳು ಏಳುವುದಿಲ್ಲ. ಇಂಗ್ಲೀಶಿನ ಲಿಪಿ ಸುದಾರಣೆಗೆ ಮತ್ತೊಂದು ದೊಡ್ಡ ತೊಡಕೇನೆಂದರೆ ಅದರಲ್ಲಿ ಸುಮಾರು (ಬೇರೆ ಬೇರೆ ಒಳನುಡಿಗಳಿಗೆ ತಕ್ಕಂತೆ) ೨೪ರಿಂದ ೨೭ ವ್ಯ್ರಂಜನಗಳು ಮತ್ತು ೧೪ ರಿಂದ ೨೦ ಸ್ವರಗಳು ಇವೆ. ಆದರೆ ವರ್ಣಮಾಲೆಯಲ್ಲಿರುವುದು ಬರಿಯ ೨೬ ಅಕ್ಶರಗಳು. ಈಗಿರುವ ೨೬ರ ಜೊತೆ ಇನ್ನೂ ೨೧ ಹೆಚ್ಚು ಅಕ್ಶರಗಳನ್ನು ಕಲಿಯಬೇಕೆಂದರೆ ಅದು ಕಶ್ಟದ ಕೆಲಸವೇ ಸರಿ. ಆದರೆ ಈ ತೆರನಾದ ಅಕ್ಶರ ಕೊರತೆಯ ತೊಂದರೆಯೂ ಕನ್ನಡಕ್ಕೆ ಇಲ್ಲ. 

ಮಹಾಪ್ರಾಣಗಳ ವಿಶಯಕ್ಕೆ ಬಂದಾಗ 'ದನವಂತ'ದ ಉದಾಹರಣೆಯನ್ನು ಕೊಟ್ಟು ಪದದ ಹುರುಳೇ ಬೇರೆಯಾಗುತ್ತದೆ ಎಂದಿದ್ದಾರೆ. ಆದರೆ ಕನ್ನಡದ ಆಡು ಮಾತಲ್ಲಿ ಮಹಾಪ್ರಾಣಗಳು (ಬೆರೆಳೆಣಿಕೆಯಶ್ಟು ಹೊರಪಡಿಕೆಗಳು ಬಿಟ್ಟು) ನಿಜಕ್ಕೂ ಇಲ್ಲ. ಮಾತಿನಲ್ಲಿ 'ದನವಂತ' ಎಂದೇ ಉಲಿಯುವ ನಮಗೆ ಮಾತಾಡುವಾಗ ಯಾವುದೇ ಗೊಂದಲವಾಗುವುದಿಲ್ಲ. ಮಾತಲ್ಲಿ ಕಾಣದ ಗೊಂದಲ ಬರಹದಲ್ಲಿ ಮಾತ್ರ ಹೇಗೆ ಮೂಡುತ್ತದೆ? ಅಲ್ಲದೇ ಒಂದು ಪದಕ್ಕೆ ಒಂದೇ ನುಡಿಯಲ್ಲಿ ಹಲವು ಹುರುಳುಗಳಿರುತ್ತವೆ. ಮಾತಿನ ಸಂದರ್ಬಕ್ಕೆ ತಕ್ಕಂತೆ ಪದಗಳ ಹುರುಳು ತಿಳಿಯಬಹುದು. ಇನ್ನು 'ಪಂಪ ಭಾರತ' ಮುಂತಾದ ಹಳೆಯ ಸಾಹಿತ್ಯದಲ್ಲಿ ಬರುವ ಮಹಾಪ್ರಾಣಗಳನ್ನಾಗಲಿ ಇನ್ನಾವುದೆ ಅಕ್ಶರಗಳನ್ನಾಗಲಿ ಮಾರ್ಪಡಿಸುವ ಅಗತ್ಯವಿಲ್ಲ. ಹೇಗೆ ಹಳೆಗನ್ನಡದಲ್ಲಿರುವ 'ಱ', '' ಅಕ್ಶರಗಳನ್ನು ಪ್ರೌಡ ಶಾಲೆಯಲ್ಲಿ ಕಲಿತು ಓದುತ್ತೇವೆಯೋ ಹಾಗೆಯೇ ಕಲಿತು ಓದಬಹುದು.

ಅಪ್ಪಟ ಕನ್ನಡದಲ್ಲಿ ಚಿಂತನೆ-ಬಾವನೆಗಳನ್ನು ಹೇಳಲೇ ಆಗದೆಂಬ ಅವರ ಮಾತೂ ಸರಿಯಲ್ಲ. ಪ್ರಪಂಚದ ಯಾವುದೇ ನುಡಿಯಲ್ಲಾದರೂ ಯಾವುದೇ ಚಿಂತನೆ-ಬಾವನೆಗಳನ್ನು ಹೇಳಬಹುದು. ಒಂದು ನುಡಿಯನ್ನಾಡುವ ಜನಾಂಗದ ಸಮಾಜ ಬದಲಾವಣೆಗಳನ್ನು ಕಂಡಂತೆ  ಹೊಸ ಪರಿಕಲ್ಪನೆಗಳು, ಚಿಂತನೆಗಳು, ಬಾವನೆಗಳು ಮತ್ತು ವಸ್ತುಗಳು ಹುಟ್ಟಿಕೊಳ್ಳುತ್ತವೆ ಮತ್ತು ಅವುಗಳನ್ನು ಆ ಜನಾಂಗದ ನುಡಿಯಲ್ಲಿ ಹೇಳುವ ಅಗತ್ಯ ಉಂಟಾಗುತ್ತದೆ. ಈ ಅಗತ್ಯ ತೀರಿಸಲು ಬೇರೆ ನುಡಿಗಳಿಂದ ಹೊಸ ಪದಗಳನ್ನು ಎರವಲು ಪಡೆಯಬಹುದು ಇಲ್ಲವೇ ಅದೇ ನುಡಿಯಲ್ಲೇ ಕಟ್ಟಲೂ ಬಹುದು. ಉದಾಹರಣೆಗೆ ವ್ಯಾಕರಣದ ಪರಿಕಲ್ಪನೆ ಸಂಸ್ಕ್ರುತದಲ್ಲಿ ಇಲ್ಲದಿದ್ದಾಗ 'ವ್ಯಂಜನ' ಪದಕ್ಕೆ 'ಅಲಂಕಾರದ ವಸ್ತು' ಎಂಬ ಹುರುಳು ಇತ್ತು. ವ್ಯಾಕರಣದ ಚಿಂತನೆ ಮೊದಲು ಮಾಡಿದಾಗ 'Consonant' ಎಂಬುದಕ್ಕೆ, ಸ್ವರವನ್ನು ಅಲಂಕರಿಸುವ ಕೆಲಸ ಮಾಡುತ್ತದೆ ಎಂಬ ಬಾವನೆಯಿಂದ, 'ವ್ಯಂಜನ' ಪದವನ್ನು ಆರಿಸಿಕೊಳ್ಳಲಾಯಿತು. ಕನ್ನಡ ಸಾಹಿತ್ಯ ಬೆಳೆಯುವ ಹೊತ್ತಿಗೆ 'ವ್ಯಂಜನ' ಪದ ಸಂಸ್ಕ್ರುತದಲ್ಲಿ ಆಗಲೇ ಇದ್ದುದರಿಂದ ಅದನ್ನೇ ಬಳಸಲಾಯಿತು. ಆದರೆ ಇಂತಹ ಪದವನ್ನು ಕನ್ನಡದಲ್ಲೂ ಕಟ್ಟಬಹುದು. ಶಂಕರ ಬಟ್ಟರು 'ತಡೆಯುಲಿ' (ಇದನ್ನು ಉಲಿಯುವಾಗ ಉಸಿರನ್ನು ತಡೆಯ ಬೇಕಾಗುತ್ತದೆ) ಎಂಬ ಪದವನ್ನು ಕಟ್ಟಿದ್ದಾರೆ.  ಇಂದಿನ ಅರಿಮೆಯ (ವಿಜ್ಞಾನ) ಚಿಂತನೆಗೂ ಸಂಸ್ಕ್ರುತದಲ್ಲಿ ಪದಗಳು ಇರಲಿಲ್ಲ / ಇಲ್ಲ. ಆದರೆ ಇರುವ ಪದಗಳನ್ನೇ ಬಳಸಿ ಕಟ್ಟಬಹುದು. 'Chlorophyl' ಪದಕ್ಕೆ ಸಂಸ್ಕ್ರುತದಲ್ಲಿ 'ಪತ್ರಹರಿತ್ತು' ಎಂಬ ಪದವನ್ನು ಕಟ್ಟಲಾಗಿದೆ. ಕನ್ನಡದಲ್ಲಿ 'ಕ್ಲೋರೊಪಿಲ್', 'ಪತ್ರಹರಿತ್ತು' ಪದಗಳಲ್ಲೊಂದನ್ನು ಎರವಲಾಗಿ ಪಡೆದು ಬಳಸಬಹುದು ಇಲ್ಲವೇ ಕನ್ನಡದಲ್ಲೇ 'ಎಲೆಹಸಿರು' ಎಂಬಂತಹ ಪದವನ್ನು ಕಟ್ಟಿಕೊಂಡು ಬಳಸಬಹುದು. ಹೀಗೆ ಯಾವುದೇ ನುಡಿಯಲ್ಲೂ ಈ ತೆರನಾದ ಪದಗಳನ್ನು ಕಟ್ಟಬಹುದು. ಹಾಗೆಂದು ನಮ್ಮಲ್ಲಿರುವ ಎಲ್ಲ ಬೇರೆ ನುಡಿಗಳ ಪದಗಳನ್ನು ಕಿತ್ತೊಗೆಯಬೇಕೆಂದಲ್ಲ. ಆದರೆ ಸಂಸ್ಕ್ರುತವಿಲ್ಲದೆ ಕನ್ನಡ ನುಡಿಗೆ ಕಸುವಿಲ್ಲವೆಂಬ ವಾದವನ್ನು ಆಳವಾಗಿ ನಂಬಿರುವ ಕನ್ನಡ ಸಮಾಜ ಇದು ಬರಿಯ ಹುಸಿನಂಬಿಕೆಯಶ್ಟೆ ಎಂಬುದನ್ನು ಅರಿಯಬೇಕಿದೆ.

'ಬಾಶೆ ಬೆಳೆಯಬೇಕಾದರೆ ಅದು ಮುಕ್ತವಾಗಿ ಅನ್ಯ ಬಾಶೆಗಳಿಂದ ಸ್ವೀಕರಿಸಬೇಕು' ಎಂಬ ಅವರ ಮಾತು ಒಪ್ಪುವಂತಹದ್ದೇ. ಅದರ ಉದಾಹಾರಣೆಯಾಗಿ 'ಟಿಕೆಟ್ಟು' ಎಂಬ ಇಂಗ್ಲೀಶಿಂದ ಬಂದ ಪದವನ್ನು ಕೊಟ್ಟಿದ್ದಾರೆ. ಆದರೆ ಈ ಪದದಲ್ಲಿ ನಾವು ಬಳಸುವ ಟ-ಕಾರ ಇಂಗ್ಲೀಶಲ್ಲಿ ಇಲ್ಲ. ಆ ಉಲಿ ಟ-ಕಾರಕ್ಕೆ ಹತ್ತಿರವಾದ್ದೇ ಹೊರತು ಟ-ಕಾರವಲ್ಲ. ನಮ್ಮ ನುಡಿಗೆ ಅದನ್ನು ತರುವಾಗ ನಮಗೆ ಹೊಂದುವಂತೆ ಟ-ಕಾರವಾಗಿ ಮಾರ್ಪಡಿಸಿಕೊಂಡಿದ್ದೇವೆ. ಇದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಆದರೆ 'ರುಶಿ', 'ದುಕ್ಕ', 'ಬಾವನೆ' ಎಂದು ಉಲಿಯುವ ಕನ್ನಡಿಗರು ಬರೆಯುವಾಗ ಮಾತ್ರ ಸಂಸ್ಕ್ರುತದಲ್ಲಿರುವಂತೆ 'ಋಷಿ', 'ದುಃಖ', 'ಭಾವನೆ' ಎಂದೇ ಬರೆಯಬೇಕೆಂಬ ವಾದ ವಿಚಿತ್ರವೆನಿಸುತ್ತದೆ. ಎಶ್ಟೋ ಪಂಡಿತರುಗಳಿಗೇ ವಿಸರ್ಗ ಮತ್ತು ಹ-ಕಾರಗಳ ನಡುವಿನ ಬೇರೆತನ ಗೊತ್ತಿಲ್ಲ. ಮಾತಲ್ಲಿ 'ನಮಹ', 'ಶಾಂತಿಹಿ' ಎಂದು ಉಲಿದು, ಬರೆಯುವಾಗ 'ನಮಃ', 'ಶಾಂತಿಃ' ಎಂದು ಬರೆಯುತ್ತಾರೆ. ಇದೇಕೆ ಹೀಗೆ ಎಂಬ ಕಾರಣ ಗೊತ್ತಿಲ್ಲದಿದ್ದರೂ ಅದೇ ಸರಿ ಎಂದು ವಾದಿಸುತ್ತಾರೆ.

ಕನ್ನಡ ಲಿಪಿಯ ಆಕಾರ ಬದಲಾದರೂ ಲಿಪಿ ವ್ಯವಸ್ತೆ ಇತಿಹಾಸದ ಉದ್ದಕ್ಕೂ ಒಂದೇ ಆಗಿದೆ ಎಂಬ ಮಾತೂ ಸರಿಯಲ್ಲ. ಮೊದಲೇ ಹೇಳಿದಂತೆ 'ಱ', 'ೞ' ಗಳು ಮಾತಲ್ಲಿ ಮಾಯವಾದಂತೆ ಲಿಪಿಯಲ್ಲೂ ಮಾಯವಾಗಿವೆ. ಸಂಸ್ಕ್ರುತದಿಂದಲೇ ಬಂದ ಜಿಹ್ವಾಮೂಲೀಯ ಮತ್ತು ಉಪದ್ಮಾನೀಯ ಎಂಬ ಯೋಗವಾಹಗಳನ್ನು, ಲ-ಕಾರದ ಎರಡು ಸ್ವರಗಳನ್ನು (ಕನ್ನಡದಿಂದ ಬೆಳೆದು ಬಂದ ತೆಲುಗು ಲಿಪಿಯಲ್ಲಿ ಇವನ್ನು ಇನ್ನೂ ಉಳಿಸಿಕೊಳ್ಳಲಾಗಿದೆ) ಕಯ್ ಬಿಡಲಾಗಿದೆ. ಹಾಗೆಯೇ ಬಳಕೆಯಲ್ಲಿಲ್ಲದ 'ಋ', 'ಷ', ಮಹಾಪ್ರಾಣ ಮುಂತದುವುಗಳನ್ನು ಕಯ್ ಬಿಡುವುದೇ ಲೇಸು.

ಮೂರ್ತಿಗಳಂತಹ ನಾಡಿನ ಹಿರಿಯರು ಒಪ್ಪದಿದ್ದರೂ ಸಾಮಾನ್ಯ ಮಂದಿ ಕೆಲವರು ಶಂಕರ ಬಟ್ಟರ ಬರಹಗಳನ್ನು ಮೆಚ್ಚಿ ವಿ.ಕ.ಕ್ಕೆ ಓಲೆಗಳನ್ನು ಬರೆದಿರುವುದು ನಲಿವಿನ ಸಂಗತಿ. ಆದರೆ ಸುದ್ದಿ ಪತ್ರಿಕೆಗಳಿಗಿಂತ ನಡುಬಲೆಯಲ್ಲಿ (Internet) ಶಂಕರ ಬಟ್ಟರ ವಾದ ಕನ್ನಡದ ಯುವಕರಲ್ಲಿ ಸಾಕಶ್ಟು ಹುರುಪು ತುಂಬಿದ ಚಟುವಟಿಕೆಗಳಿಗೆ ಕಾರಣವಾಗಿದೆ. ಬ್ಲಾಗುಗಳಲ್ಲಿ ಮತ್ತು ಪೇಸ್ಬುಕ್ಕಿನಂತಹ ತಾಣಗಳಲ್ಲಿ ಈಗಾಗಲೇ ಬಹಳಶ್ಟು ಚರ್ಚೆಗಳು ನಡೆದಿವೆ / ನಡೆಯುತ್ತಲಿವೆ. ಕನ್ನಡದ ಸೊಗಡು, ಪದಗಳ ಇಟ್ಟಳ ಮತ್ತು ಸೊಲ್ಲರಿಮೆ(ವ್ಯಾಕರಣ)ಗಳನ್ನು ಸರಿಯಾಗಿ ಅರಿತು ಅಪ್ಪಟ ಕನ್ನಡದಲ್ಲೇ ಪಾರಿಬಾಶಿಕ ಪದಗಳನ್ನು ಕಟ್ಟುವ ಪ್ರಯೋಗಗಳು ಹಲವು ಗುಂಪುಗಳಲ್ಲಿ ನಡೆಯುತ್ತಿವೆ. ಈ ಪ್ರಯೋಗಗಳಿಂದ ಹೊರಬಂದ ಕೆಲವು ಪದಗಳು ಇಂದು ದಿನಪತ್ರಿಕೆಗಳಲ್ಲೂ ಬಳಕೆಗೆ ಬಂದಿವೆ. ಇಂತಹ ಬೆಳವಣಿಗೆಗಳನ್ನು ಕಂಡಾಗ 'ಕಬ್ಬಿಣದ ಕಡಲೆ'ಯಾಗಿರುವ ಕನ್ನಡ 'ಎಲ್ಲರ ಕನ್ನಡ'ವಾಗುವ ದಿನ ದೂರವಿಲ್ಲವೆಂಬ ತಿಳಿಯಾದ ಸೂಚನೆ ಕಾಣಿಸುತ್ತಿದೆ.

ಗುರುವಾರ, ಅಕ್ಟೋಬರ್ 25, 2012

ಬಾದಾಮಿ - ಬನಶಂಕರಿ

ಬಾದಾಮಿ ಎಂದ ಕೂಡಲೇ ನಮಗೆ ನೆನಪಾಗುವುದು ಚಾಲುಕ್ಯ ಅರಸುಮನೆತನ, ಗವಿ ದೇಗುಲಗಳು ಮತ್ತು ಅಲ್ಲಿನ ಬನಶಂಕರಿಯ ಗುಡಿ. ಒಂದು ಹೊತ್ತಲ್ಲಿ ಇಡೀ ಇಂಡಿಯಾದಲ್ಲೇ ತೀರಾ ಹೆಚ್ಚು ಬಲ ಹೊಂದಿದ ದೊರೆ ಪುಲಿಕೇಶಿಯ ಸಾಮ್ರಾಜ್ಯದ ರಾಜದಾನಿಯಾದ ಇಲ್ಲಿ ಇಂದು ಬರಿಯ ಆ ಮಿರುಗಿನ ಬೆರಗಿನ ಹಿನ್ನಡವಳಿಯ ಕೆಲವು ಕುರುಹುಗಳಶ್ಟೆ ಉಳಿದುಕೊಂಡಿವೆ. ಇರಲಿ, ಈ ಬರಹದ ಗುರಿ ಬಾದಾಮಿಯ ಹೆಸರಿನ ಬೇರನ್ನು ಗಮನಿಸುವುದಾಗಿದೆ.

ಈಗ ಸಾಮಾನ್ಯವಾಗಿರುವ ನಂಬಿಕೆಯೆಂದರೆ ಇದರ ಮೊದಲ ಹೆಸರು 'ವಾತಾಪಿ'ಯಾಗಿದ್ದು, ಹೊತ್ತು ಕಳೆದಂತೆ ಮಂದಿಯ ಬಾಯಲ್ಲಿ ಇದರ ಉಲಿಕೆ ಮಾರ್ಪಾಟು ಹೊಂದಿ 'ಬಾದಾಮಿ'ಯಾಯಿತು ಎಂದು. ಈ ನಂಬಿಕೆಗೆ ಕಾರಣವೂ ಇದೆ. ಹಲವು ಚಾಲುಕ್ಯ ಮತ್ತು ಇನ್ನಿತರೇ ಅರಸು-ಮನೆತನಗಳ ಕಲ್ಬರಹಗಳಲ್ಲಿ ಬಾದಾಮಿಯನ್ನು ವಾತಾಪಿಯೆಂದೇ ಕರೆಯಲಾಗಿದೆ. ಹಾಗಿದ್ದರೆ ವಾತಾಪಿ ಎಂಬ ಹೆಸರಿನ ಬೇರೇನೆಂದು ಕೇಳಿದರೆ ಕೆಲವರು ಈ ಊರು ರಾಮಾಯಣದಲ್ಲಿ ಬರುವ ರಕ್ಕಸ ವಾತಾಪಿಯಿಂದ ಬಂದಿತೆನ್ನುತ್ತಾರೆ. ಈ ವಿಕಿಪೀಡಿಯ ಬರಹದಲ್ಲಿ ಕೂಡ ಇದನ್ನೇ ಬರೆಯಲಾಗಿದೆ.

ಈ ಕತೆಗಳನ್ನು ಒಮ್ಮೆ ಬದಿಗಿಟ್ಟು ಈಗ ಕೆಲ ದಿಟಗಳನ್ನು ಗಮನಿಸೋಣ. ಮೊದಲೇ ಹೇಳಿದಂತೆ ಬಾದಾಮಿಯು ಬನಶಂಕರಿಯ ಗುಡಿಗೆ ಹೆಸರುವಾಸಿ. ಬನಶಂಕರಿ ಯಾವುದೇ ವೇದ-ಪುರಾಣಗಳಲ್ಲಿ ಹೇಳಲಾಗಿರುವ ದೇವತೆಯಲ್ಲ. ಅವಳು ಮಾರಮ್ಮ, ಎಲ್ಲಮ್ಮ, ಕಬ್ಬಾಳಮ್ಮ, ಕೆಂಪಮ್ಮ, ಅಣ್ಣಮ್ಮ ಇದ್ದಂತೆ ನಾಡ ಮಂದಿಯ ದೇವತೆ. ಕರ್ನಾಟಕದ ಹಲವು ಕಡೆ ಈ ದೇವಿಯ ದೇಗುಲಗಳು, ಮೂರ್ತಿಗಳು ಸಿಕ್ಕಿವೆ. ಇವಳ ಮೂಲ ಹೆಸರು 'ಬಾದುಮೆ', 'ಬಾದುಂಬೆ', 'ಬಾದಬ್ಬೆ', 'ಬಾದಮ್ಮ' ಎಂದು. ಈ ಹೆಸರುಗಳು ಹಲವು ಹಳೆಯ ಕಲ್ಬರಹಗಳಲ್ಲದೆ ಹಳೆಯ ಕನ್ನಡದ ಬರಹಗಳಲ್ಲೂ ಬರುತ್ತದೆ. ಎತ್ತುಗೆಗೆ, ಬಸವಣ್ಣರ ಒಂದು ವಚನದಲ್ಲಿ 'ಬಾದುಮೆ'ಯ ಬಗ್ಗೆ ಹೇಳಲಾಗಿದೆ. ಈ ಬಾದುಮೆಯು ನೆಲೆಸಿರುವ ಊರಿಗೆ ಬಾದಾಮಿ ಎಂಬ ಹೆಸರು ಬಂದಿರಬಹುದು. ಇದಕ್ಕೆ ಯಾವುದೇ ನೇರ ಆದಾರಾಗಳಿಲ್ಲದಿದ್ದರೂ ಬಾದುಮೆ-ಬಾದಾಮಿ ಹೆಸರುಗಳ ಹೋಲಿಕೆಯನ್ನು ಗಮನಿಸಿ ಹೆಚ್ಚು ಕಡಿಮೆ ಎಲ್ಲ ಹಿನ್ನಡವಳಿಯರಿಗರೂ ಒಪ್ಪುತ್ತಾರೆ.

ಈ ಹಳೆಯ ಬಾದಾಮಿಯೇ ಸಕ್ಕದಿಸಿದಾಗ ವಾತಾಪಿಯಾಯಿತು. ಮತ್ತು ಸಕ್ಕದವೇ ಎಲ್ಲಕ್ಕೂ ಮೇಲು, ಬೇರು ಎಂಬ ತಪ್ಪು ನಂಬಿಕೆಯಿಂದ, ಹೊತ್ತು ಕಳೆದಂತೆ, ಇದರ ಮೂಲ ಹೆಸರೇ ವಾತಾಪಿ ಎಂಬ ನಂಬಿಕೆ ನೆಲೆಯೂರಿತು. ಬಾದಾಮಿ ಸಕ್ಕದಗೊಂಡು ವಾತಾಪಿಯಾದರೆ ಬಾದುಮೆಯು ಸಕ್ಕದಗೊಂಡು ಬನಶಂಕರಿಯಾದಳು.