ಶನಿವಾರ, ಜನವರಿ 26, 2013

ಬೆಂಗಳೂರು


ತಿಟ್ಟ: kar.nic.in


ಊರುಗಳ ಬಗ್ಗೆ ಮಾತಾಡ್ತಾ (ಹಿಂದಿನ ಬರಹ ಒಂದರಲ್ಲಿ ಬಾದಾಮಿ ಬಗ್ಗೆ ಬರೆದಿದ್ದೆ) ನಮ್ಮ ಬೆಂಗಳೂರಿನ ಬಗ್ಗೆ ಎರಡು ಮಾತು. ಇದು ನಮಗೆ ಗೊತ್ತಿರುವ ಮಾತೇ, ಆದರೂ ಮತ್ತೆ ಹೇಳ ಬಯಸುವೆ. ಬೆಂಗಳೂರು ಹೆಸರಿನ ಹುಟ್ಟಿನ ಬಗ್ಗೆ ಈಗ ಎಲ್ಲರಿಗೂ ಗೊತ್ತಿರುವ ಒಂದು (ಸುಳ್ಳು) ಕತೆ ಇದೆ. ಹಲವರು ಅದೇ ನಿಜ ಎಂದು ನಂಬಿದ್ದಾರೆ ಕೂಡ. ಕತೆ ಹೀಗಿದೆ: ಬೆಂಗಳೂರು ಸುಮಾರು ೧೨ನೇ  ನೂರ್ಮಾನದಲ್ಲಿ ಕಾಡಾಗಿತ್ತೆಂದೂ ಮತ್ತು ಅಂದಿನ ಹೊಯ್ಸಳ ದೊರೆ ಇಮ್ಮಡಿ ವೀರಬಲ್ಲಾಳನು ಇಲ್ಲಿ ಬೇಟೆಯಾಡಲು ಬಂದು, ಹೊತ್ತು ಮುಳುಗಿ, ಒಬ್ಬ ಮುದುಕಿಯ ಗುಡಿಸಿಲಲ್ಲಿ ಇದ್ದು, ಆಕೆ ಕೊಟ್ಟ ಬೆಂದ ಕಾಳುಗಳನ್ನು ತಿಂದ ಕಾರಣ, ಈ ಜಾಗಕ್ಕೆ ಬೆಂದಕಾಳೂರು ಎಂಬ ಹೆಸರು ಬಂದಿತು ಎಂಬುದು ಆ ಕತೆ. ಮುಂದೆ ಬೆಂದಕಾಳೂರು, ಬೆಂಗಳೂರು ಆಯಿತಂತೆ.

ಕೆಂಪೇಗೌಡ ೧೫೩೬ರಲ್ಲಿ ಬೆಂಗಳೂರು ಪಟ್ಟಣವನ್ನು ಕಟ್ಟಿಸಿದನಾದರೂ ಆ ಮೊದಲೇ ಬೆಂಗಳೂರೆಂಬ ಒಂದು ಸಣ್ಣ ಊರು ಇತ್ತೆಂಬುದು ಎಲ್ಲರಿಗೂ ತಿಳಿದಿರುವ ಮಾತೇ. ಹಾಗಿದ್ದರೆ ಆ ಸಣ್ಣ ಊರೇ ಬಲ್ಲಾಳನ ಬೆಂದಕಾಳೂರೇ (ಮೇಲಿನ ಕತೆಯನ್ನು ನಂಬುವುದಾದರೆ)? ಹಿಂದಿನ ದಿಟಗಳನ್ನು ಕಂಡು ಹಿಡಿಯುವಾಗ ಈ ರೀತಿಯ ಕತೆಗಳು ನಮಗೆ ಗಟ್ಟಿ ನೆಲೆಯನ್ನು ಕೊಡುವುದಿಲ್ಲ. ಗಟ್ಟಿ ನೆಲೆಯೆಂದರೆ ಆಗಿನ ಕಲ್ಬರಹ, ತಾಮ್ರ ಪಟದ ಬರಹ, ನಲ್ಬರಹ (ಸಾಹಿತ್ಯ) ಇವುಗಳು ಇನ್ನೂ ಹೆಚ್ಚು ನಂಬಲಾಗುವಂತಹ ಕುರುಹುಗಳನ್ನು ಕೊಡಬಹುದು. ಹಾಗಿದ್ದರೆ ೧೨ನೇ ನೂರ್ಮಾನದ ಸುತ್ತ ಮುತ್ತ, ಇಲ್ಲವೇ ಅದಕ್ಕೂ ಮೊದಲು 'ಬೆಂಗಳೂರು' ಇಲ್ಲವೆ ಅದನ್ನು ಹೋಲುವ ಊರಿನ ಹೆಸರು ಯಾವುದಾದರೂ ಬರಹಗಳಲ್ಲಿ ಕಂಡು ಬಂದಿದೆಯೇ ಎಂದು ನೋಡೋಣ.

ಎಲೆಕ್ಟ್ರಾನಿಕ್ ಸಿಟಿಯ ಬಳಿ, ಹೊಸೂರು ಬೀದಿಯಲ್ಲಿ ಬೇಗೂರು ಎಂಬ ಊರಿದೆ. ಅಲ್ಲಿ ಹಳೆಯ ನಾಗನಾತನ ಒಂದು ಗುಡಿಯಲ್ಲಿ ಒಂದು ವೀರಗಲ್ಲಿನ ಮೇಲೆ ಒಂದು ಕಲ್ಬರಹವಿದೆ. ಈ ಕಲ್ಬರಹದಲ್ಲಿ ಬೆಂಗಳೂರಿನ ಹೆಸರು ಬಂದಿದೆ: '...ಬೆಂಗಳೂರು ಕಾಳೆಗದೊಳ್ ಬುಟ್ಟಣ ಸೆಟ್ಟಿ ಸತ್ತಮ್...'. ಅಂದರೆ ಇದು ಬುಟ್ಟಣ ಸೆಟ್ಟಿಯೆಂಬ ಒಬ್ಬ ವೀರನ ಕತೆ ಹೇಳುವ ವೀರಗಲ್ಲು. ಅವನು ಬೆಂಗಳೂರಿನ ಕಾಳಗದಲ್ಲಿ ಹೋರಾಡಿ ಸತ್ತನಂತೆ. ಈ ವೀರಗಲ್ಲು ಸುಮಾರು ೯ನೇ ನೂರ್ಮಾನದ್ದು. ಹಾಗಿದ್ದ ಮೇಲೆ ಬೆಂಗಳೂರು ಎಂಬ ಊರು ೯ನೇ ನೂರ್ಮಾನದಲ್ಲಾಗಲೇ ಇದ್ದಿತೆಂದು ಹೇಳಬಹುದು ಮತ್ತು ವೀರಬಲ್ಲಾಳನ ಬೆಂದಕಾಳೂರಿನ ಕತೆ ದಿಟವಲ್ಲ ಎಂಬ ತೀರ್ಮಾನಕ್ಕೆ ಬರಬಹುದು!

ಆದರೆ ಬೆಂಗಳೂರು ಹೆಸರಿನ ಅರ್ತವೇನು, ಮೂಲವೇನು ಎಂಬ ಪ್ರಶ್ನೆಗೆ ನಮಗೆ ಇನ್ನೂ ಉತ್ತರ ದೊರಕಿಲ್ಲ. ಆದರೆ ಊಹೆಗಳನ್ನು ಮಾಡಬಹುದು. ೯-೧೦ ನೇ ನೂರ್ಮಾನದಲ್ಲಿ ಬೆಂಗಳೂರಿನ ಸುತ್ತ ಮುತ್ತಲಿನ ಪ್ರದೇಶ ಗಂಗ-ಚೋಳ ನಾಡುಗಳ ಗಡಿಯಾಗಿತ್ತು. ಹಾಗಾಗಿ ಗಂಗರು ಇಲ್ಲಿ ತಮ್ಮ ಬೆಂಗಾವಲು ಪಡೆಯನ್ನು  ನಿಲ್ಲಿಸಿದ್ದರೆಂಬುದಕ್ಕೆ ಸಾಕಶ್ಟು ಪುರಾವೆಗಳಿವೆ. ಬುಟ್ಟಣ ಸೆಟ್ಟಿಯು ಈ ಪಡೆಯಲ್ಲಿ ಒಬ್ಬ ಕಾದಾಳಾಗಿದ್ದಿರಬಹುದು. ಹಾಗಾಗಿ ಇದು ಮೊದಲು ಗಂಗರ 'ಬೆಂಗಾವಲೂರು' (garrison town) ಆಗಿದ್ದು ಮುಂದೆ ಇದೇ ಬೆಂಗಳೂರಾಗಿದೆ ಎಂದು ಕೆಲವರ ಅನಿಸಿಕೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ