ಶನಿವಾರ, ಡಿಸೆಂಬರ್ 1, 2012

ನಿಕಾರಾಗುವದ ಒಂದು ಎತ್ತುಗೆ




ಚಿತ್ರ: ಗೂಗಲ್ಲಿಂದ


ನಿಕಾರಾಗುವದಲ್ಲಿ ೭೦-೮೦ರಲ್ಲಿ ಆದ ಒಂದು ಬೆಳವಣಿಗೆಯ ಬಗ್ಗೆ ಹೇಳುತ್ತೇನೆ. ೭೦ರ ಹೊತ್ತಲ್ಲಿ ಅಲ್ಲಿ ಕಿವುಡು-ಮೂಗು ಮಕ್ಕಳಿಗಾಗಿ ಶಾಲೆಯೊಂದು  ತೆರೆಯಲಾಯಿತು. ಇದಕ್ಕೂ ಮೊದಲು ಇಂತಹ ಮಕ್ಕಗಳಿಗೆಂದು ಶಾಲೆಗಳು ಇರಲಿಲ್ಲ. ಅಲ್ಲಿ ಅವರುಗಳಿಗೆ ಸ್ಪ್ಯಾನಿಶ್ ನುಡಿಯನ್ನೂ ಮತ್ತು ತುಟಿಯೋದುವುದನ್ನೂ (lip reading) ಕಲಿಸಲಾಗುತ್ತಿತ್ತು. ಆದರೆ ಹತ್ತು-ಹನ್ನೆರಡು ವರ್ಶಗಳಾದರೂ ಅಲ್ಲಿನ ಮಕ್ಕಳು ಸ್ಪ್ಯಾನಿಶ್ ನುಡಿಯನ್ನು ಸರಿಯಾಗಿ ಕಲಿಯಲೇ ಇಲ್ಲ. ಅಲ್ಲಿನ ಕಲಿಸುವವರು ಈ ಮಕ್ಕಳಿಗೆ ಕಲಿಸಲು ಆಗುವುದಿಲ್ಲವೆಂದು ಕಯ್ ಚೆಲ್ಲಿ ಕೂತರು. ಅದಲ್ಲದೇ ಈ ಮಕ್ಕಳು ತಮ್ಮ ತಮ್ಮಲ್ಲೇ ಸಯ್ಗೆಗಳೊಂದಿಗೆ ಮಾತಾಡಿಕೊಳ್ಳುತ್ತಿದ್ದರು. ಇದೇನೋ ಕೆಲಸಕ್ಕೆ ಬಾರದ ಮೂಗರ ಸಯ್ಗೆಗಳೆಂದು ಮೊದಲಿಗೆ ಅಸಡ್ಡೆ ತೋರಿದ ಕಲಿಸುಗರು, ಮಕ್ಕಳಿಗೆ ಕಲಿಸಲೂ ಆಗದೇ ತಮ್ಮ ತಮ್ಮಲ್ಲೇ ಅದೇನು ಮಾತಾಡಿಕೊಳ್ಳುತ್ತಿದ್ದಾರೆಂಬುದನ್ನು ತಿಳಿಯಲೂ ಆಗದೆ ಅಮೇರಿಕಾದ ಯುನಿವರ್ಸಿಟಿಗಳಿಂದ ನೆರವು ಕೋರಿದರು.

ಅಮೆರಿಕಾದಿಂದ ಬಂದ ನುಡಿಯರಿಗರು (linguists) ಮಕ್ಕಳ ಸಯ್ಗೆಗಳನ್ನು ಗಮಿನಿಸ ತೊಡಗಿದರು ಮತ್ತು ಅದರ ಬಗ್ಗೆ ಆರಯ್ಕೆ (research) ನಡೆಸಿದರು. ಆ ಶಾಲೆಯ ದೊಡ್ಡ ಮಕ್ಕಳ (೧೧-೧೫ ವಯಸ್ಸಿನವರು) ಸಯ್ಗೆಗಳನ್ನ ಗಮನಿಸಿದ ತಂಡ ಬೆರಗಾಯಿತು. ಈ ಮಕ್ಕಳು ತಮ್ಮೊಂದಿಗೆ ಸಯ್ಗೆಗಳ  ಮೂಲಕ ಮಾತಾಡಿಕೊಂಡು ತಮ್ಮದೇ ಆದ ನುಡಿಯನ್ನು ಮಾಡಿಕೊಂಡು ಬಿಟ್ಟಿದ್ದರು! ಆದರೆ ಈ ನುಡಿಯು ಅರೆ-ಬರೆ ನುಡಿಯಾಗಿತ್ತು, ಪಿಜಿನ್ ಎಂದು ಹೇಳಬಹುದಿತ್ತು ಅಶ್ಟೆ. ಆದರೂ ಬರೀ ೧೦-೧೫ ವರ್ಶಗಳಲ್ಲಿ ಮಕ್ಕಳು ತಾವಾಗೆ ಇಂತಹ ಒಂದು ನುಡಿಯನ್ನು ಮಾಡಿಕೊಂಡಿದ್ದರು ಎಂದರೆ ಏನಾಶ್ಚರ್ಯ ಅಲ್ಲವೇ? ಆದರೆ ಇನ್ನೂ ಚಿಕ್ಕ ಮಕ್ಕಳ ಸಯ್ಗೆಗಳನ್ನು ಆರಯ್ಯಲು ಹೊರಟ ಈ ತಂಡಕ್ಕೆ ಮತ್ತೊಂದು ದೊಡ್ಡ ಆಶ್ಚರ್ಯ ಕಾದಿತ್ತು.

ಈ ಚಿಕ್ಕ ಮಕ್ಕಳು ದೊಡ್ಡ ಮಕ್ಕಳಿಂದ ಕಲಿತ ನುಡಿಯನ್ನು ಮುಂದುವರೆಸಿ ಅದನ್ನು ಒಂದು ತುಂಬು ನುಡಿಯನ್ನಾಗಿಸಿದ್ದರು. ಎಶ್ಟರ ಮಟ್ಟಿಗೆ ಎಂದು ಕೇಳುತ್ತೀರಾ? ಸಾವಿರ್ರಾರು ವರ್ಶಗಳಿಂದ ಬೆಳೆದು ಬಂದ ನುಡಿಗಳಲ್ಲಿ ಕಾಣುವ ಸೊಲ್ಲಿರಿಮೆಯ (ವ್ಯಾಕರಣ) ಸಂಕೀರ್ಣತೆ ಈ ಪುಟ್ಟ ಮಕ್ಕಳ ಸಯ್ಗೆಯ ನುಡಿಯ ಸೊಲ್ಲರಿಮೆಯಲ್ಲೂ ಕಂಡಿತು! ಈ ಕಂಡುಹಿಡಿತವು ಪ್ರಪಂಚದ ಎಲ್ಲ ನುಡಿಯರಿಗರನ್ನು ಬೆರಗುಗೊಳಿಸಿತ್ತು.  ನುಡಿಯ ಹುಟ್ಟು ಮತ್ತು ಬೆಳವಣಿಗೆಯ ಬಗ್ಗೆ, ಅರಿಮೆಯ ಸಮುದಾಯದಲ್ಲೇ (ಸೈಂಟಿಫಿಕ್ ಕಮ್ಯೂನಿಟಿ), ಅಂದಿನವರೆಗೂ ಇದ್ದ ಎಶ್ಟೋ ನಂಬಿಕೆಗಳು ಬಿದ್ದು ಹೋದವು.

ಇದರಿಂದ ನಾವೇನು ತಿಳಿಯಬಹುದು? ಮನುಶ್ಯನಿಗೆ ತನ್ನ ಒಡನಾಡಿಗಳೊಂದಿಗೆ ಒಡನಾಡಲು, ಮಾತಾಡಲು ಬೇಕಾಗುವ ನುಡಿಯ ಸೊಲ್ಲರಿಮೆಯೆಂಬುದು ಹುಟ್ಟು ಗುಣ. ಆ ಸೊಲ್ಲರಿಮೆ ಅವನ ಮೆದುಳಿನಲ್ಲಿ ಹುಟ್ಟುವಾಗಲೇ ಇರುತ್ತದೆ. ಚಿಕ್ಕ ಮಗುವೊಂದು ತನ್ನ ತಾಯಿ ತಂದೆ, ಇನ್ನಿತರ ನಂಟರು ಮಾತಾಡುವುದನ್ನು ನೋಡಿ ಅವರ ನುಡಿಯ ಸೊಲ್ಲರಿಮೆಯನ್ನು ತಿಳಿದು ತನ್ನ ಮೆದುಳಿನಲ್ಲಿರುವ ಸೊಲ್ಲರಿಮೆಗೆ ಹೊಂದಿಸಿಕೊಳ್ಳುತ್ತದೆ. ಹೀಗೆ ತನ್ನ ತಾಯ್ನುಡಿಯನ್ನು ಕಲಿಯುತ್ತದೆ. ಅಶ್ಟೇ ಅಲ್ಲದೆ, ನುಡಿಯೊಂದು ಕಿವಿಗೆ ಬೀಳದಿದ್ದಲ್ಲಿ ತನ್ನದೇ ಹೊಸ ನುಡಿಯೊಂದನ್ನು ಕಟ್ಟುವ ಕಸುವು ಕೂಡ ಒಂದು ಪುಟ್ಟ ಮಗುವಿಗೆ ಇರುತ್ತದೆ. ಇದಕ್ಕೆ ಕಾರಣ, ಮೇಲೆ ಹೇಳಿದಂತೆ, ಮನುಶ್ಯನ ಮೆದುಳಲ್ಲಿ ಹುಟ್ಟಿನಿಂದಲೇ ಬರುವ ಸೊಲ್ಲರಿಮೆ. 

ಆದರೆ ಇದರ ವಿಚಾರವಾಗಿ ಇಂದಿಗೂ ನಮ್ಮಲ್ಲಿ ಹಲವು ತಪ್ಪು ನಂಬಿಕೆಗಳಿವೆ. ಬಯ್ಬಲ್ಲಿನಲ್ಲಿ ಮೊದಲು ಒಂದೇ ನುಡಿಯಿದ್ದು ಆಮೇಲೆ ಅಲ್ಲಿಂದ ಎಲ್ಲಾ ನುಡಿಗಳು ಹುಟ್ಟಿಕೊಂಡವು (ಬೇಬಲ್ ಟವರ್ ಕತೆ) ಎಂದು ಹೇಳಲಾಗಿದೆ. ನಮ್ಮ ದೇಶದಲ್ಲಿ ಸಕ್ಕದವೇ ಎಲ್ಲ ನುಡಿಗಳಿಗೂ ಮೂಲ ಎಂಬ ನಂಬಿಕೆಯೂ ಇದೆ. ಹಾಗೆಯೇ ದ್ರಾವಿಡ ಚಳುವಳಿಯ ಕೆಲವು ಪಂಡಿತರುಗಳು, ಸಕ್ಕದ ಪಂಡಿತರುಗಳನ್ನು ನೋಡಿಕೊಂಡು, ತಾವೇನು ಕಮ್ಮಿ ಎಂದು, ತಮಿಳೇ ಎಲ್ಲ ನುಡಿಗಳ ಮೂಲ ಎಂದು ವಾದಿಸಿದ್ದೂ ಇದೆ. ಈ ನಿಲುವುಗಳನ್ನು, ನಂಬಿಕೆಗಳನ್ನು ಆಳವಾಗಿ ನಂಬುವವರು ತುಂಬಾ ಮಂದಿಯುಂಟು. ಆದರೆ ನಿಜಕ್ಕೂ ನುಡಿಯ ಮೂಲ ಇರುವುದು ಮನುಶ್ಯನ ಮೆದುಳಲ್ಲಿ. ಹುಟ್ಟಿದ ಕರುವಿಗೆ ತಾಯಿಯ ಕೆಚ್ಚಲಿಂದ ಹಾಲು ಕುಡಿಯುವುದು ಹೇಳಿಕೊಡಬೇಕಾಗಿಲ್ಲ. ಹಾಗೇ ಮನುಶ್ಯನಿಗೆ ನುಡಿಯ ಸೊಲ್ಲರಿಮೆ ಹೇಳಿಕೊಡ ಬೇಕಾಗಿಲ್ಲ. ತನ್ನ ಪರಿಸರದ ಸದ್ದುಗಳನ್ನು ಕೇಳಿ ಅದನ್ನು ಬಳಸಿಕೊಂಡು ನುಡಿಯನ್ನು ಕಟ್ಟುವ ಕಸುವು ಮನುಶ್ಯನಲ್ಲೇ ಇರುತ್ತದೆ. ಸದ್ದುಗಳನ್ನು ಕೇಳಲಾಗದ ಕಿವುಡನಾಗಿದ್ದರೆ ಸಯ್ಗೆಗಳೇ ಸಾಕು. ದೇವರು ಕೊಟ್ಟ ನುಡಿಯೋ, ಇಲ್ಲ ಬೇರೆ ಇನ್ನಾವುದೋ ಮೂಲ ನುಡಿ ಇರಲೇ ಬೇಕೆಂದೇನೂ ಇಲ್ಲ.