ಶನಿವಾರ, ಜನವರಿ 26, 2013

ಬೆಂಗಳೂರು


ತಿಟ್ಟ: kar.nic.in


ಊರುಗಳ ಬಗ್ಗೆ ಮಾತಾಡ್ತಾ (ಹಿಂದಿನ ಬರಹ ಒಂದರಲ್ಲಿ ಬಾದಾಮಿ ಬಗ್ಗೆ ಬರೆದಿದ್ದೆ) ನಮ್ಮ ಬೆಂಗಳೂರಿನ ಬಗ್ಗೆ ಎರಡು ಮಾತು. ಇದು ನಮಗೆ ಗೊತ್ತಿರುವ ಮಾತೇ, ಆದರೂ ಮತ್ತೆ ಹೇಳ ಬಯಸುವೆ. ಬೆಂಗಳೂರು ಹೆಸರಿನ ಹುಟ್ಟಿನ ಬಗ್ಗೆ ಈಗ ಎಲ್ಲರಿಗೂ ಗೊತ್ತಿರುವ ಒಂದು (ಸುಳ್ಳು) ಕತೆ ಇದೆ. ಹಲವರು ಅದೇ ನಿಜ ಎಂದು ನಂಬಿದ್ದಾರೆ ಕೂಡ. ಕತೆ ಹೀಗಿದೆ: ಬೆಂಗಳೂರು ಸುಮಾರು ೧೨ನೇ  ನೂರ್ಮಾನದಲ್ಲಿ ಕಾಡಾಗಿತ್ತೆಂದೂ ಮತ್ತು ಅಂದಿನ ಹೊಯ್ಸಳ ದೊರೆ ಇಮ್ಮಡಿ ವೀರಬಲ್ಲಾಳನು ಇಲ್ಲಿ ಬೇಟೆಯಾಡಲು ಬಂದು, ಹೊತ್ತು ಮುಳುಗಿ, ಒಬ್ಬ ಮುದುಕಿಯ ಗುಡಿಸಿಲಲ್ಲಿ ಇದ್ದು, ಆಕೆ ಕೊಟ್ಟ ಬೆಂದ ಕಾಳುಗಳನ್ನು ತಿಂದ ಕಾರಣ, ಈ ಜಾಗಕ್ಕೆ ಬೆಂದಕಾಳೂರು ಎಂಬ ಹೆಸರು ಬಂದಿತು ಎಂಬುದು ಆ ಕತೆ. ಮುಂದೆ ಬೆಂದಕಾಳೂರು, ಬೆಂಗಳೂರು ಆಯಿತಂತೆ.

ಕೆಂಪೇಗೌಡ ೧೫೩೬ರಲ್ಲಿ ಬೆಂಗಳೂರು ಪಟ್ಟಣವನ್ನು ಕಟ್ಟಿಸಿದನಾದರೂ ಆ ಮೊದಲೇ ಬೆಂಗಳೂರೆಂಬ ಒಂದು ಸಣ್ಣ ಊರು ಇತ್ತೆಂಬುದು ಎಲ್ಲರಿಗೂ ತಿಳಿದಿರುವ ಮಾತೇ. ಹಾಗಿದ್ದರೆ ಆ ಸಣ್ಣ ಊರೇ ಬಲ್ಲಾಳನ ಬೆಂದಕಾಳೂರೇ (ಮೇಲಿನ ಕತೆಯನ್ನು ನಂಬುವುದಾದರೆ)? ಹಿಂದಿನ ದಿಟಗಳನ್ನು ಕಂಡು ಹಿಡಿಯುವಾಗ ಈ ರೀತಿಯ ಕತೆಗಳು ನಮಗೆ ಗಟ್ಟಿ ನೆಲೆಯನ್ನು ಕೊಡುವುದಿಲ್ಲ. ಗಟ್ಟಿ ನೆಲೆಯೆಂದರೆ ಆಗಿನ ಕಲ್ಬರಹ, ತಾಮ್ರ ಪಟದ ಬರಹ, ನಲ್ಬರಹ (ಸಾಹಿತ್ಯ) ಇವುಗಳು ಇನ್ನೂ ಹೆಚ್ಚು ನಂಬಲಾಗುವಂತಹ ಕುರುಹುಗಳನ್ನು ಕೊಡಬಹುದು. ಹಾಗಿದ್ದರೆ ೧೨ನೇ ನೂರ್ಮಾನದ ಸುತ್ತ ಮುತ್ತ, ಇಲ್ಲವೇ ಅದಕ್ಕೂ ಮೊದಲು 'ಬೆಂಗಳೂರು' ಇಲ್ಲವೆ ಅದನ್ನು ಹೋಲುವ ಊರಿನ ಹೆಸರು ಯಾವುದಾದರೂ ಬರಹಗಳಲ್ಲಿ ಕಂಡು ಬಂದಿದೆಯೇ ಎಂದು ನೋಡೋಣ.

ಎಲೆಕ್ಟ್ರಾನಿಕ್ ಸಿಟಿಯ ಬಳಿ, ಹೊಸೂರು ಬೀದಿಯಲ್ಲಿ ಬೇಗೂರು ಎಂಬ ಊರಿದೆ. ಅಲ್ಲಿ ಹಳೆಯ ನಾಗನಾತನ ಒಂದು ಗುಡಿಯಲ್ಲಿ ಒಂದು ವೀರಗಲ್ಲಿನ ಮೇಲೆ ಒಂದು ಕಲ್ಬರಹವಿದೆ. ಈ ಕಲ್ಬರಹದಲ್ಲಿ ಬೆಂಗಳೂರಿನ ಹೆಸರು ಬಂದಿದೆ: '...ಬೆಂಗಳೂರು ಕಾಳೆಗದೊಳ್ ಬುಟ್ಟಣ ಸೆಟ್ಟಿ ಸತ್ತಮ್...'. ಅಂದರೆ ಇದು ಬುಟ್ಟಣ ಸೆಟ್ಟಿಯೆಂಬ ಒಬ್ಬ ವೀರನ ಕತೆ ಹೇಳುವ ವೀರಗಲ್ಲು. ಅವನು ಬೆಂಗಳೂರಿನ ಕಾಳಗದಲ್ಲಿ ಹೋರಾಡಿ ಸತ್ತನಂತೆ. ಈ ವೀರಗಲ್ಲು ಸುಮಾರು ೯ನೇ ನೂರ್ಮಾನದ್ದು. ಹಾಗಿದ್ದ ಮೇಲೆ ಬೆಂಗಳೂರು ಎಂಬ ಊರು ೯ನೇ ನೂರ್ಮಾನದಲ್ಲಾಗಲೇ ಇದ್ದಿತೆಂದು ಹೇಳಬಹುದು ಮತ್ತು ವೀರಬಲ್ಲಾಳನ ಬೆಂದಕಾಳೂರಿನ ಕತೆ ದಿಟವಲ್ಲ ಎಂಬ ತೀರ್ಮಾನಕ್ಕೆ ಬರಬಹುದು!

ಆದರೆ ಬೆಂಗಳೂರು ಹೆಸರಿನ ಅರ್ತವೇನು, ಮೂಲವೇನು ಎಂಬ ಪ್ರಶ್ನೆಗೆ ನಮಗೆ ಇನ್ನೂ ಉತ್ತರ ದೊರಕಿಲ್ಲ. ಆದರೆ ಊಹೆಗಳನ್ನು ಮಾಡಬಹುದು. ೯-೧೦ ನೇ ನೂರ್ಮಾನದಲ್ಲಿ ಬೆಂಗಳೂರಿನ ಸುತ್ತ ಮುತ್ತಲಿನ ಪ್ರದೇಶ ಗಂಗ-ಚೋಳ ನಾಡುಗಳ ಗಡಿಯಾಗಿತ್ತು. ಹಾಗಾಗಿ ಗಂಗರು ಇಲ್ಲಿ ತಮ್ಮ ಬೆಂಗಾವಲು ಪಡೆಯನ್ನು  ನಿಲ್ಲಿಸಿದ್ದರೆಂಬುದಕ್ಕೆ ಸಾಕಶ್ಟು ಪುರಾವೆಗಳಿವೆ. ಬುಟ್ಟಣ ಸೆಟ್ಟಿಯು ಈ ಪಡೆಯಲ್ಲಿ ಒಬ್ಬ ಕಾದಾಳಾಗಿದ್ದಿರಬಹುದು. ಹಾಗಾಗಿ ಇದು ಮೊದಲು ಗಂಗರ 'ಬೆಂಗಾವಲೂರು' (garrison town) ಆಗಿದ್ದು ಮುಂದೆ ಇದೇ ಬೆಂಗಳೂರಾಗಿದೆ ಎಂದು ಕೆಲವರ ಅನಿಸಿಕೆ. 

ಒಲ್ಲದ ಪ್ರಾಣಾಯಾಮ

ಹಲವು ಕನ್ನಡಿಗರು, ಮಹಾಪ್ರಾಣ ಮತ್ತು ಹಕಾರಗಳು ಇಲ್ಲದ ಕಡೆ ಅವುಗಳನ್ನು ತೂರಿಸಿ, ತಪ್ಪು ತಪ್ಪಾಗಿ ತಪ್ಪಾಗಿ ಉಲಿಯುವುದನ್ನು ನಾವು ಗಮನಿಸಿರುತ್ತೇವೆ. ಎತ್ತುಗೆಗೆ 'ಹಾದರದ ಸ್ವಾಗತ', 'ಆರ್ಧಿಕ ಶುಭಾಶಯಗಳು', 'ಸರಿಯಾದ ಸಂಧರ್ಭ' ಇಂತಹ ತಪ್ಪುಗಳು ಸರ್ವೇ ಸಾಮಾನ್ಯ. ಇದನ್ನು ಹಲವರು ಲೇವಡಿ ಮಾಡಿರುವುದೂ ಉಂಟು ಮತ್ತು  ಕೆಲವರು ಕನ್ನಡಿಗರಿಗೆ ಕನ್ನಡ ಆಡುವುದೇ ಬರುವುದಿಲ್ಲ ಎಂದು ತೀರ್ಪು ಕೊಟ್ಟಿರುವುದೂ ಉಂಟು. ಇನ್ನು ನಮ್ಮಂತಹ ಕೆಲವು ಮಂದಿ, ಅವರು ಹಾಗೆ ಉಚ್ಚರಿಸಲು ಕಾರಣ, ಆಡುನುಡಿಯಲ್ಲಿರದ ಸಕ್ಕದದ ಮತ್ತು ಕೆಲವು ಪಾಗದದ ರೂಪಗಳನ್ನು ಮೂಲದಲ್ಲಿರುವಂತೆಯೇ ಉಲಿಯುವ ಒತ್ತಡ ಅವರ ಈ ತಪ್ಪುಗಳಿಗೆ ಕಾರಣ ಎಂದು ಅವರ ಪರವಾಗಿ ನಿಂತೂ ಇದ್ದೇವೆ.  ಇದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದು ಹೋಗಿವೆ, ಹಾಗಾಗಿ ಇಲ್ಲಿ ಮತ್ತೆ ಅದೇ ವಿಶಯವನ್ನು ಹೆಕ್ಕಿ ತೆಗೆದು ಚರ್ಚೆ ಮಾಡುವುದಿಲ್ಲ. ಬದಲಾಗಿ ನನ್ನ ಒಂದು ಗಮನಿಕೆ ಹೇಳುತ್ತೇನೆ.

ಈ ತೆರನಾದ ಸಕ್ಕದದ ಪ್ರಬಾವ ನಮ್ಮ ನುಡಿಯ ಮೇಲೆ ಎಶ್ಟಾಗಿದೆ ಅಂದರೆ ಹಲವು ಅಚ್ಚ ಕನ್ನಡದ ಪದಗಳಲ್ಲೇ ಈ ಮಹಾಪ್ರಾಣ ಹಕಾರಗಳು ಹೊಕ್ಕು ಇಂದು ಅವು ಬರಹದಲ್ಲೂ ಒಪ್ಪಿಗೆ ಪಡೆದುಕೊಂಡು ಬಿಟ್ಟಿವೆ. ಕೆಳಗೆ ಕೆಲವು ಎತ್ತುಗೆಗಳನ್ನು ಕೊಟ್ಟಿದ್ದೇನೆ. ಈ ಎತ್ತುಗೆಗಳಲ್ಲಿ ಅಚ್ಚಗನ್ನಡದ ಪದಗಳ ಜೊತೆಯಲ್ಲಿ ಕನ್ನಡಕ್ಕೆ ತೀರಾ ಒಗ್ಗಿ ಕನ್ನಡ ಪದಗಳಂತೆ ಕಾಣುವ ತದ್ಬವಗಳೂ ಕೆಲವೊಂದಿವೆ.

ಘಮ - ಗಮ; ಕಮ್, ಕಂಪು ಮುಂತಾದ ಪದಗಳಿಗೆ ನಂಟಿರುವ ಇದು ಗಮ ಇಂದ ಘಮ ಆಗಿದೆ.
ಭತ್ತ - ಬತ್ತ; ಪಾಗದ 'ಭಾತ್' ಜೊತೆ ನಂಟಿದ್ದರೂ ಕನ್ನಡದ ರೂಪ 'ಬತ್ತ' ಎಂದೇ. ಆದರೂ ಇದು ಇಂದು 'ಭತ್ತ' ಆಗಿದೆ.
ಒಂಭತ್ತು  -  ಮಾತಾಡುವಾಗ 'ಒಂಬತ್ತು' ಎಂದೇ ಉಲಿದರೂ ಅದೇಕೋ ಹಲವರಿಗೆ 'ಒಂಭತ್ತು' ಎಂಬುದೇ ಸರಿಯಾದ ರೂಪ ಎಂದೆನಿಸುತ್ತದೆ.
ಹರಿಶಿನ - ಅರಿಶಿನ, ಅರಿಸಿನ ಎಂಬುದನ್ನ ಕೆಲವೊಮ್ಮೆ ಹೀಗೆ ಉಲಿಯುವುದು ಉಂಟು. 'ದ್ರಾವಿಡಿಯನ್ ಎಟಿಮಾಲಜಿಕಲ್ ಡಿಕ್ಶನರಿ'ಯಲ್ಲಿ ಇದು ಕನ್ನಡ ಮೂಲದ ಪದವೆಂದೇ ಹೇಳಲಾಗಿದೆ ಮತ್ತು ಅದರೊಂದಿಗೆ ಯಾವುದೇ ಸಕ್ಕದ/ ಪಾಗದದ ನಂಟು ಕೊಟ್ಟಿಲ್ಲ. ಆದರೆ ಕೊಳಂಬೆಯವರ ಪದನೆರಕೆಯಲ್ಲಿ ಇದರ ಮೂಲ ಸಕ್ಕದದ 'ಹರಿದ್ರೆ' ಎಂದು ಹೇಳಲಾಗಿದೆ. ಅದೇನೇ ಇರಲಿ ಕನ್ನಡದಲ್ಲಿ ಇದು ಯಾವತ್ತೂ ಅರಿಶಿನ/ ಅರಿಸಿನವೇ ಆಗಿತ್ತು. ಮೇಲಿನ 'ಒಂಭತ್ತು' ಎತ್ತುಗೆಯಲ್ಲಿ ಹೇಳಿದಂತೆ ಇದು ತಪ್ಪು ತಿಳಿವಳಿಕೆಯಿಂದ ಆದುದು.
ಖಾರ/ ಘಾಟು - ಕಾರ/ ಗಾಟು ಎಂದು ಹೇಳಿದರೂ ಬರೆಯುವಾಗ ಖಾರ/ ಘಾಟು ಎಂದೇ ಬರೆಯುತ್ತೇವೆ.
 ಗಲಭೆ - ಗಲಬೆ, ಭಾವಿ - ಬಾವಿ, ಭಾವ - ಬಾವ (ಇದು ಸಕ್ಕದದ ಮೂಲವೇ ಆದರೂ ಮೇಲೆ ಹೇಳಿದಂತೆ ಕನ್ನಡಕ್ಕೆ ಒಗ್ಗಿ ಹೋಗಿರುವ ಪದ), ಹೀಗೆ ಇನ್ನೂ ಹಲವು ಎತ್ತುಗೆಗಳನ್ನು ಕೊಡಬಹುದು.



ಬುಧವಾರ, ಜನವರಿ 16, 2013

ಹಟ್ಟಿಯ ಹಬ್ಬ



ವಾಡಿ, ವಾಡ, ವಾಡೆ ಇಂದ ಕೊನೆಗೊಳ್ಳುವ ಹಲವು ಎಡೆಗಳ ಹೆಸರುಗಳನ್ನು ಇಂದು ಬಡಗಣ(ಉತ್ತರ)ದ ನಾಡುಗಳಲ್ಲಿ ಕಾಣಬಹುದು. ಎತ್ತುಗೆಗೆ ಇಲ್ಲಿ ಕೆಲವು ಹೆಸರುಗಳನ್ನು ಕೊಟ್ಟಿದ್ದೇನೆ:

ಮಹಾರಾಶ್ಟ್ರ: ಯೇರವಾಡ, ಹಿಂಜಾವಾಡಿ, ಕಲ್ವಾಡಿ, ಜಾದವವಾಡಿ, ನಾಗೇವಾಡಿ, ಮಾರಾಟವಾಡ   
ಗುಜರಾತ: ಕೇರ್ವಾಡ, ನಾಸವಾಡಿ, ಬೋರಾತ್ವಾಡ 
ದಂತೇವಾಡ   (ಚತ್ತೀಸ್ ಗಡ), ಬಾಸ್ವಾಡ (ರಾಜಾಸ್ತಾನ), ಬೀಲ್ವಾಡ  (ರಾಜಾಸ್ತಾನ)

ನಮಗೆ ಹತ್ತಿರದ ಮಹಾರಾಶ್ಟ್ರದಲ್ಲಿ ಹೇರಳವಾಗಿ ಕಾಣಸಿಗುವ ಈ ಹೆಸರುಗಳು, ಗುಜರಾತಿನಲ್ಲಿ ಕೊಂಚ ಕಡಿಮೆಯಾಗಿ, ಬಡಗದ ರಾಜಸ್ತಾನದಲ್ಲಿ ಇನ್ನೂ ವಿರಳವಾಗಿ, ಪಂಜಾಬಲ್ಲಿ ಮಾಯವಾಗುತ್ತವೆ. ಹಲವು ಅರಿಗರು, ತಿಳಿವಿಗರು ಇದು ಸಕ್ಕದ (ಸಂಸ್ಕ್ರುತ) ಮೂಲದ ವಾಟಿಕೆ ಎಂಬ ಪದವು ಪಾಗದಕ್ಕೆ (ಪ್ರಾಕ್ರುತ) ಬಂದು ವಾಟ, ವಾಡ, ವಾಡಿ ಆಗಿದೆ ಎನ್ನುತ್ತಾರೆ. ಇದಲ್ಲದೆ ಇದೇ ರೂಪಗಳು ತೆಂಕಣ ನಾಡುಗಳಿಗೂ ಹಬ್ಬಿ 'ವಾಡ', 'ವಾಡಿ', 'ಪಾಡಿ', 'ಬಾಡಿ' ಇಂದ ಕೊನೆಗೊಳ್ಳುವ ಊರುಗಳು ಹುಟ್ಟಿಕೊಂಡವಂತೆ. ಸಕ್ಕದದಲ್ಲಿ ವಾಟಿಕೆ ಎಂದರೆ ಮರಗಳ ಗುಂಪು ಎಂಬ ಹುರುಳಿದೆ. ಹಾಗಾಗಿ ಮರಗಳ ಗುಂಪುಗಳ/ ತೋಪುಗಳ ಬಳಿ ತಲೆಯೆತ್ತಿದ ಊರುಗಳಿಗೆ ಈ ಹೆಸರು ಬಂದಿರಬಹುದೆಂಬುದು ಇವರುಗಳ ಅನಿಸಿಕೆ. 

ಆದರೆ ಈ ಪದಹುಟ್ಟು ವಿವರಣೆಯು ಸರಿಯಲ್ಲವೆಂದು ಇನ್ನಿತರೇ ಕೆಲವು ವಿಶಯಗಳನ್ನು ಗಮನಿಸಿದಾಗ ತಿಳಿಯುತ್ತದೆ. ತೆಂಕಣ(ದಕ್ಶಿಣ)ದ ನಾಡುಗಳಲ್ಲಿ ಈ ಪರಿಯ ಹೆಸರುಗಳು ಬೇಕಾದಶ್ಟು ಸಿಗುತ್ತದೆ. ಎತ್ತುಗೆಗೆ ದಾರವಾಡ, ಸಾರವಾಡ (ವಿಜಾಪುರ), ಗಾವರವಾಡ, ಕಾಸ್ಪಾಡಿ (ಸಾಗಾರ), ಕನ್ನಂಬಾಡಿ, ವಿಜಯವಾಡ (ಆಂದ್ರ), ಕಾಟ್ಪಾಡಿ (ತಮಿಳುನಾಡು). ನಮ್ಮ ಬೆಂಗಳೂರಿನಲ್ಲೇ ಬಾಣಸವಾಡಿ ಎಂಬ ಕೇರಿಯಿದೆ. ಇನ್ನು ಬಡಗದ ನಾಡುಗಳಲ್ಲಿ ಮಹಾರಾಶ್ಟ್ರ, ಗುಜರಾತಗಳಲ್ಲಿ  ಬಿಟ್ಟರೆ ಅಲ್ಲೊಂದು  ಇಲ್ಲೊಂದು ಎಂಬಂತೆ ಕೆಲವೇ ಕೆಲವು ಎತ್ತುಗೆಗಳು ಸಿಗುತ್ತವೆ. ಇನ್ನು ಇತರೆ ಆರ್ಯರ ನಾಡುಗಳಾದ ಇರಾನ್, ಯುರೋಪುಗಳಲ್ಲಂತೂ ಈ ತೆರನಾದ ಹೆಸರುಗಳು ಇಲ್ಲವೇ ಇಲ್ಲ. ಮತ್ತು ಮೇಲೆ ಹೇಳಿದ ಮಹಾರಾಶ್ಟ್ರ, ಗುಜರಾತಗಳು ಮೊದಲು ದ್ರಾವಿಡದ, ಅದರಲ್ಲೂ ಕನ್ನಡದ ನಾಡುಗಳೇ ಆಗಿದ್ದುವೆಂಬುದು ಗೊತ್ತಿರುವ ಸಂಗತಿಯೇ. ಹಾಗಾಗಿ, ಈ ಹೆಸರುಗಳು ದ್ರಾವಿಡ ಮೂಲದ್ದೇ ಇರಬಹುದೆನ್ನಬಹುದು.  ಶಂ.ಬಾ ಜೋಶಿಗಳ ಪ್ರಕಾರ ಇದನ್ನು ಸಕ್ಕದದ 'ವಾಟಿಕಾ' ಪದಕ್ಕೆ ಹೊಂದಿಸುವುದಕ್ಕಿಂತ ದ್ರಾವಿಡದ 'ಪಟ್ಟಿ' ( ಹೊಸಗನ್ನಡ: ಹಟ್ಟಿ) ಪದಕ್ಕೆ ಹೊಂದಿಸುವುದೇ ಸೂಕ್ತ.

ಮಾನವನು ಅಲೆಮಾರಿ ಬದುಕನ್ನು ಬಿಟ್ಟು, ಒಕ್ಕಲುತನ, ಪ್ರಾಣಿ ಸಾಕಣಿಕೆ ಕಲಿತು ಮೊದಲು ಊರುಗಳಲ್ಲಿ ನೆಲೆ ನಿಂತಾಗ ಹಟ್ಟಿಗಳನ್ನು ಕಟ್ಟಿಕೊಂಡನು. ದನ, ಎಮ್ಮೆ ಕುರಿಗಳ ಸಕಣಿಕೆಯಿಂದ ತನ್ನ ಬದುಕಿನ ಹಾದಿಯನ್ನು ಕಂಡುಕೊಂಡನು. ಮೂಲ ಕನ್ನಡ ಜನಾಂಗದವರು ಇಂತಹ ಕುರುಬ/ ಹಾಲು ಮತದವರಾಗಿದ್ದು ಹಲವು ಕಡೆಗಳಲ್ಲಿ 'ಪಟ್ಟಿ'ಗಳನ್ನು ಕಟ್ಟಿಕೊಂಡರು. ಪಾಡಿ, ಬಾಡಿ, ಹಟ್ಟಿ, ವಾಡಿ, ವಾಡ - ಇವೆಲ್ಲವೂ ಇದೇ 'ಪಟ್ಟಿ' ಪದದ ಬೇರೆ ಬೇರೆ ರೂಪಗಳು. ಇಂದಿನ ದ್ರಾವಿಡ ನಾಡುಗಳಲ್ಲದೇ ಹಿಂದೆ ದ್ರಾವಿಡ ಸೀಮೆಗೇ ಸೇರಿದ ನಾಡುಗಳಲ್ಲೂ ಈ ಹೆಸರುಗಳು ಉಳಿದುಕೊಂಡಿವೆ. 'ಮರಾಟಿ'ಯೆಂಬುದಕ್ಕೆ ಕೂಡ 'ಮರ ಹಟ್ಟಿ' ಎಂಬ ಕನ್ನಡ ಮೂಲವಿದೆ. ಮರಾಟಿಯ ಕೆಲವು ಹಳೆಯ ಕ್ರುತಿಗಳಲ್ಲಿಯೇ 'ಮರ್ಹಾಟಿ' ಎಂಬ ಬಳಕೆಯನ್ನು ಕಾಣಬಹುದು. 'ಮಹಾರಾಶ್ಟ್ರ' ಎಂಬುದು ಬಳಿಕ ಆದ 'ಮರಹಟ್ಟಿ' ಪದದ ಸಕ್ಕದಿಸಿಕೆ (ಸಂಸ್ಕೃತೀಕರಣ).

ಈ ಬರಹವನ್ನು ಮುಗಿಸುವ ಮೊದಲು ಇನ್ನೊಂದು ವಿಶಯ ಹೇಳಲು ಬಯಸುವೆ. ಸಾಹಿತ್ಯ ಪರಿಶತ್ತಿನ ಪದನೆರಕೆಯಲ್ಲಿ 'ಹಟ್ಟಿಯ ಹಬ್ಬ' ಎಂಬ ಪದವನ್ನು ಕಂಡೆ. ಇದಕ್ಕೆ 'ದೀಪಾವಳಿ ಹಬ್ಬ' ಎಂಬ ಹುರುಳು ಕೊಡಲಾಗಿದೆ. ಇದರ ಬಗ್ಗೆ ಶಂ.ಬಾ ಜೋಶಿಯವರು ಕೂಡ ತಮ್ಮ 'ಕರ್ನಾಟಕದ ವೀರಕ್ಶತ್ರಿಯರು' ಎಂಬ ಹೊತ್ತಗೆಯಲ್ಲಿ ಹೇಳಿದ್ದಾರೆ. ನಮ್ಮ ನಾಡಿನ ಎಶ್ಟೋ ಹಳ್ಳಿಗಳಲ್ಲಿ ಇಂದಿಗೂ ಇದನ್ನು ಹಟ್ಟೀ ಹಬ್ಬ ಎಂದೇ ಕರೆಯುತ್ತಾರೆ.  ಮೂಲವಾಗಿ ದೀಪಾವಳಿಯು ನಮ್ಮ ನಾಡ ಮಂದಿಯಾದ ಹಟ್ಟಿಕಾರರ ಹಬ್ಬ. ಇದು ಸೊಡರು ಹಬ್ಬ - ದೀಪಗಳ ಹಬ್ಬವಾಗಿ ಕೊಂಡಾಡುವ ಮೊದಲು ಹಟ್ಟಿಯ ದನಗಳ ಹಬ್ಬವಾಗಿತ್ತೆಂದು ತೋರುತ್ತದೆ.