ಶನಿವಾರ, ಜನವರಿ 26, 2013

ಒಲ್ಲದ ಪ್ರಾಣಾಯಾಮ

ಹಲವು ಕನ್ನಡಿಗರು, ಮಹಾಪ್ರಾಣ ಮತ್ತು ಹಕಾರಗಳು ಇಲ್ಲದ ಕಡೆ ಅವುಗಳನ್ನು ತೂರಿಸಿ, ತಪ್ಪು ತಪ್ಪಾಗಿ ತಪ್ಪಾಗಿ ಉಲಿಯುವುದನ್ನು ನಾವು ಗಮನಿಸಿರುತ್ತೇವೆ. ಎತ್ತುಗೆಗೆ 'ಹಾದರದ ಸ್ವಾಗತ', 'ಆರ್ಧಿಕ ಶುಭಾಶಯಗಳು', 'ಸರಿಯಾದ ಸಂಧರ್ಭ' ಇಂತಹ ತಪ್ಪುಗಳು ಸರ್ವೇ ಸಾಮಾನ್ಯ. ಇದನ್ನು ಹಲವರು ಲೇವಡಿ ಮಾಡಿರುವುದೂ ಉಂಟು ಮತ್ತು  ಕೆಲವರು ಕನ್ನಡಿಗರಿಗೆ ಕನ್ನಡ ಆಡುವುದೇ ಬರುವುದಿಲ್ಲ ಎಂದು ತೀರ್ಪು ಕೊಟ್ಟಿರುವುದೂ ಉಂಟು. ಇನ್ನು ನಮ್ಮಂತಹ ಕೆಲವು ಮಂದಿ, ಅವರು ಹಾಗೆ ಉಚ್ಚರಿಸಲು ಕಾರಣ, ಆಡುನುಡಿಯಲ್ಲಿರದ ಸಕ್ಕದದ ಮತ್ತು ಕೆಲವು ಪಾಗದದ ರೂಪಗಳನ್ನು ಮೂಲದಲ್ಲಿರುವಂತೆಯೇ ಉಲಿಯುವ ಒತ್ತಡ ಅವರ ಈ ತಪ್ಪುಗಳಿಗೆ ಕಾರಣ ಎಂದು ಅವರ ಪರವಾಗಿ ನಿಂತೂ ಇದ್ದೇವೆ.  ಇದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದು ಹೋಗಿವೆ, ಹಾಗಾಗಿ ಇಲ್ಲಿ ಮತ್ತೆ ಅದೇ ವಿಶಯವನ್ನು ಹೆಕ್ಕಿ ತೆಗೆದು ಚರ್ಚೆ ಮಾಡುವುದಿಲ್ಲ. ಬದಲಾಗಿ ನನ್ನ ಒಂದು ಗಮನಿಕೆ ಹೇಳುತ್ತೇನೆ.

ಈ ತೆರನಾದ ಸಕ್ಕದದ ಪ್ರಬಾವ ನಮ್ಮ ನುಡಿಯ ಮೇಲೆ ಎಶ್ಟಾಗಿದೆ ಅಂದರೆ ಹಲವು ಅಚ್ಚ ಕನ್ನಡದ ಪದಗಳಲ್ಲೇ ಈ ಮಹಾಪ್ರಾಣ ಹಕಾರಗಳು ಹೊಕ್ಕು ಇಂದು ಅವು ಬರಹದಲ್ಲೂ ಒಪ್ಪಿಗೆ ಪಡೆದುಕೊಂಡು ಬಿಟ್ಟಿವೆ. ಕೆಳಗೆ ಕೆಲವು ಎತ್ತುಗೆಗಳನ್ನು ಕೊಟ್ಟಿದ್ದೇನೆ. ಈ ಎತ್ತುಗೆಗಳಲ್ಲಿ ಅಚ್ಚಗನ್ನಡದ ಪದಗಳ ಜೊತೆಯಲ್ಲಿ ಕನ್ನಡಕ್ಕೆ ತೀರಾ ಒಗ್ಗಿ ಕನ್ನಡ ಪದಗಳಂತೆ ಕಾಣುವ ತದ್ಬವಗಳೂ ಕೆಲವೊಂದಿವೆ.

ಘಮ - ಗಮ; ಕಮ್, ಕಂಪು ಮುಂತಾದ ಪದಗಳಿಗೆ ನಂಟಿರುವ ಇದು ಗಮ ಇಂದ ಘಮ ಆಗಿದೆ.
ಭತ್ತ - ಬತ್ತ; ಪಾಗದ 'ಭಾತ್' ಜೊತೆ ನಂಟಿದ್ದರೂ ಕನ್ನಡದ ರೂಪ 'ಬತ್ತ' ಎಂದೇ. ಆದರೂ ಇದು ಇಂದು 'ಭತ್ತ' ಆಗಿದೆ.
ಒಂಭತ್ತು  -  ಮಾತಾಡುವಾಗ 'ಒಂಬತ್ತು' ಎಂದೇ ಉಲಿದರೂ ಅದೇಕೋ ಹಲವರಿಗೆ 'ಒಂಭತ್ತು' ಎಂಬುದೇ ಸರಿಯಾದ ರೂಪ ಎಂದೆನಿಸುತ್ತದೆ.
ಹರಿಶಿನ - ಅರಿಶಿನ, ಅರಿಸಿನ ಎಂಬುದನ್ನ ಕೆಲವೊಮ್ಮೆ ಹೀಗೆ ಉಲಿಯುವುದು ಉಂಟು. 'ದ್ರಾವಿಡಿಯನ್ ಎಟಿಮಾಲಜಿಕಲ್ ಡಿಕ್ಶನರಿ'ಯಲ್ಲಿ ಇದು ಕನ್ನಡ ಮೂಲದ ಪದವೆಂದೇ ಹೇಳಲಾಗಿದೆ ಮತ್ತು ಅದರೊಂದಿಗೆ ಯಾವುದೇ ಸಕ್ಕದ/ ಪಾಗದದ ನಂಟು ಕೊಟ್ಟಿಲ್ಲ. ಆದರೆ ಕೊಳಂಬೆಯವರ ಪದನೆರಕೆಯಲ್ಲಿ ಇದರ ಮೂಲ ಸಕ್ಕದದ 'ಹರಿದ್ರೆ' ಎಂದು ಹೇಳಲಾಗಿದೆ. ಅದೇನೇ ಇರಲಿ ಕನ್ನಡದಲ್ಲಿ ಇದು ಯಾವತ್ತೂ ಅರಿಶಿನ/ ಅರಿಸಿನವೇ ಆಗಿತ್ತು. ಮೇಲಿನ 'ಒಂಭತ್ತು' ಎತ್ತುಗೆಯಲ್ಲಿ ಹೇಳಿದಂತೆ ಇದು ತಪ್ಪು ತಿಳಿವಳಿಕೆಯಿಂದ ಆದುದು.
ಖಾರ/ ಘಾಟು - ಕಾರ/ ಗಾಟು ಎಂದು ಹೇಳಿದರೂ ಬರೆಯುವಾಗ ಖಾರ/ ಘಾಟು ಎಂದೇ ಬರೆಯುತ್ತೇವೆ.
 ಗಲಭೆ - ಗಲಬೆ, ಭಾವಿ - ಬಾವಿ, ಭಾವ - ಬಾವ (ಇದು ಸಕ್ಕದದ ಮೂಲವೇ ಆದರೂ ಮೇಲೆ ಹೇಳಿದಂತೆ ಕನ್ನಡಕ್ಕೆ ಒಗ್ಗಿ ಹೋಗಿರುವ ಪದ), ಹೀಗೆ ಇನ್ನೂ ಹಲವು ಎತ್ತುಗೆಗಳನ್ನು ಕೊಡಬಹುದು.



5 ಕಾಮೆಂಟ್‌ಗಳು:

  1. ಸರಿಯಾಗಿ ಹೇಳಿದ್ದೀರಿ ಸಂದೀಪ್. ಒಳ್ಳೆಯ ಬರಹ. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ? ಇರುವ ದಿಟವನ್ನು ಮತ್ತು ಬದಲಾವಣೆಯನ್ನು ಒಪ್ಪಿಕೊಳ್ಳುವ ಮನಸ್ಸು ಬೇಕು.

    ಪ್ರತ್ಯುತ್ತರಅಳಿಸಿ
  2. ಸಂದೀಪ್,
    ಈ ಕೆಲವು ಪದಗಳನ್ನೂ ಸೇರಿಸಬಹುದೆನ್ನಿಸಿತು. ಅವು ನೀವು ಸೂಚಿಸಿದ ಗುಂಪಿಗೆ ಸೇರದವಾಗಿದ್ದರೆ ತಿಳಿಸಿ.
    ಇಷ್ಟು - ಇಶ್ಟು ಎಂದು ಉಲಿಯಲ್ಪಟ್ಟರೂ ಬರೆಯುವಾಗ ’ಷ’ (ಉಲಿಕೆಯಲ್ಲಿಲ್ಲದ) ಬಳಸಲಾಗುತ್ತದೆ.
    ’ಎಷ್ಟು’ ಕೂಡಾ.

    ಪ್ರತ್ಯುತ್ತರಅಳಿಸಿ
  3. ಪ್ರಿಯಾಂಕ್, ಇದರ ಬಗ್ಗೆ ನನಗೆ ಅಶ್ಟು ಕಡಾ ಕಂಡಿತವಾಗಿ ತಿಳಿದಿಲ್ಲ, ಆದರೂ ನಾನು ಗಮನಿಸಿದ್ದರಲ್ಲಿ ಕಂಡು ಕೊಂಡದ್ದನ್ನು ಹೇಳುತ್ತೇನೆ.

    'ಷ' ಉಲಿಕೆಯು ಕೆಲವು ಸಂದರ್ಬಗಳಲ್ಲಿ ಕನ್ನಡದಲ್ಲಿ ಬರುವುದುಂಟು, ಆದರೆ ಕನ್ನಡದ ಕಿವಿಗಳಿಗೆ ಇದಕ್ಕೂ 'ಶ' ಉಲಿಕೆಗೂ ಇರುವ ಬೇರೆತನ ತಿಳಿಯುವುದಿಲ್ಲ ಅಶ್ಟೇ. ಎತ್ತುಗೆಗೆ 'ಕ್ಶಮಿಸು' ಎಂದು ಹೇಳುವಾಗ ಅಲ್ಲಿ ಸ್ವಾಬಾವಿಕವಾಗಿ 'ಷ' ಬರುತ್ತದೆ. ಹಾಗೇ 'ಇಶ್ಟು' ಎಂದು ಹೇಳುವಾಗ ಅಲ್ಲಿ ಸ್ವಾಬಾವಿಕವಾಗಿ ಬರುವುದು 'ಷ'ಕಾರವೇ. ಆದರೆ ಇದು ನಮ್ಮ ಅರಿವಿಗೆ ಬರುವುದಿಲ್ಲ. ಇದನ್ನು ಸಲೀಸಾಗಿ ತಿಳಿಸಲು ಒಂದು ಎತ್ತುಗೆಯನ್ನು ಕೊಡುತ್ತೇನೆ.

    ಇಂಗ್ಲೀಶಿಂದ ನಮ್ಮ ಬಾರತದ ನುಡಿಗಳಿಗೆ ಬಂದ 'ಗೋಲ್ಡ್' ಎಂಬ ಪದವನ್ನು ತೆಗೆದುಕೊಳ್ಳೋಣ. ಈ ಪದದ ಕೊನೆಯಲ್ಲಿರುವ ಡಕಾರವನ್ನು ಹೇಳುವಾಗ ನಾಲಿಗೆಯನ್ನು ಹಿಂದಕ್ಕೆ ಕೊಂಚ ತಿರುಗಿಸ ಬೇಕಾಗುತ್ತದೆ. ಹಾಗಾಗಿ ಇದನ್ನು retroflex ಎನ್ನುತ್ತಾರೆ. ಆದರೆ ಇದರ ಮುಂಚೆ ಬರುವ ಲಕಾರ ಹಲ್ಲಿನಿಂದ ಹುಟ್ಟಿಸುವಂತಹ ಉಲಿ. ಹಾಗಾಗಿ ಈ 'ಲ'ಕಾರ, 'ಡ'ಕಾರಗಳನ್ನು ಒಂದರ ಹಿಂದೆ ಒಂದಂತೆ ಅಶ್ಟು ಸಲೀಸಾಗಿ ಉಲಿಯಲು ಬರುವುದಿಲ್ಲ. ಆದರೆ ಲಕಾರವನ್ನು ಹಲ್ಲಿನಿಂದ ಹುಟ್ಟಿಸುವ ಬದಲು ಅದನ್ನೂ retroflex ಆಗಿ ಉಲಿದರೆ ಇದರ ಉಲಿಕೆ ಸಲೀಸಾಗುತ್ತದೆ. 'ಲ'ಕಾರ retroflex ಆದರೆ ಆಗುವುದು 'ಳ'ಕಾರ. ಹಾಗಾಗಿ ನಾನು ಗಮನಿಸಿದಂತೆ ತೆಂಕಣಿಗರಲ್ಲದೆ ಬಡಗಣಿಗರೂ ಇದನ್ನು 'ಗೋಳ್ಡ್' ಎಂದೇ ಉಲಿಯುತ್ತಾರೆ. ಬಡಗಣಿಗರ ನುಡಿಯಲ್ಲಿ 'ಳ' ಇಲ್ಲದಿದ್ದರೂ ಈ ಸಂದರ್ಬದಲ್ಲಿ ಅವರು ಉಲಿಯುತ್ತಾರೆ, ಆದರೆ ಅದು ಅವರ ಅರಿವಿಗೆ ಬರುವುದಿಲ್ಲ. ಆದರೆ ಬೇರೆ ಕಡೆಗಳಲ್ಲಿ 'ಳ' ಹೇಳುವುದಕ್ಕೆ ಅವರಿಗೆ ಬರುವುದಿಲ್ಲ, ಅಂದರೆ 'ಪಾಳ್ಯ' ಎಂಬುದನ್ನು 'ಪಾಲ್ಯ' ಅಂತಲೂ ಮತ್ತು 'ಬೆಂಗಳೂರು' ಎಂಬುದನ್ನು 'ಬೇಂಗ್ಲೂರ್' ಅಂತಲೂ ನುಡಿಯುತ್ತಾರೆ.

    ಮೇಲೆ ಹೇಳಿದಂತೆ ಕನ್ನಡಿಗರು ಕೆಲವು ಸಂದರ್ಬಗಳಲ್ಲಿ ಪದದ ಕಟ್ಟಿನಲ್ಲಿ ಸ್ವಾಬಾವಿಕವಾಗಿ ಬರುವ 'ಷ'ಕಾರ ಉಲಿದರೂ, ಅದು 'ಶ'ಕಾರದಿಂದ ಹೇಗೆ ಬೇರೆಯಾಗಿದೆ ಎಂದು ಗುರುತಿಸಿ ಹೇಳಲು ಅವರಿಗೆ ಬರುವುದಿಲ್ಲ. ಆದರೆ 'ಷಣ್ಮುಖ' ಎಂದು ಹೇಳುವ ಕಡೆ ಸ್ವಾಬಾವಿಕವಾಗಿ 'ಷ'ಕಾರ ಬರುವುದಿಲ್ಲ, ಹಾಗಾಗಿ 'ಶಣ್ಮುಕ' ಎಂದೇ ಹೇಳುತ್ತಾರೆ.

    ಇವುಗಳ ಬೇರೆತನ ಕಾಣಿಸದ ಸಲುವಾಗಿಯೇ ಶಂಕರ ಬಟ್ಟರು ಈ ಎರಡು ಬಗೆಯ ಉಲಿಕೆಗೂ ಒಂದೇ ಬರಿಗೆಯನ್ನು ಬಳಸಲು ಹೇಳಿರುವುದು. ಈ ಬೇರ್ಮೆ ನುಡಿಯರಿಮೆ, ಉಲಿಯರಿಮೆ (phonetics) ಓದಲು ಬಯಸುವವರು ತಿಳಿದುಕೊಂಡರೆ ಸಾಕು, ಸಾಮಾನ್ಯ ಮಂದಿಗೆ ಇದು ಅನಗತ್ಯ ಹಾಗಾಗಿ ಅವರು ಬಳಸುವ ಲಿಪಿಯಲ್ಲೂ ಇದು ಅನಗತ್ಯ.

    ಪ್ರತ್ಯುತ್ತರಅಳಿಸಿ
  4. ಸಂದೀಪ್,
    ಇಶ್ಟು ಎನ್ನುವಾಗಲೂ ಕೂಡ ಸ್ವಾಬಾವಿಕವಾಗಿ 'ಷ' ಕಾರ ಬರುತ್ತದೆ ಎಂಬುದನ್ನು ಒಪ್ಪಲಾಗುವುದಿಲ್ಲ.

    'ಷ್ಟ್' ಎಂಬ ಉಲಿಕಂತೆಯಲ್ಲಿ ನಾಲಿಗೆ ಹಿಂದಕ್ಕೆ ಮಡಿಸಿಕೊಳ್ಳುವುದು 'ಟ' ಇರುವ ಕಾರಣವೇ ಹೊರತು 'ಷ'ಕಾರಕ್ಕಾಗಿ ಅಲ್ಲ. ಸಂಸ್ಕ್ರುತದಲ್ಲಿರುವ ಬರೀ 'ಷ' ಕಾರವನ್ನು ಉಲಿಯುವಾಗಲೇ ನಾಲಿಗೆ ಹಿಂದಕ್ಕೆ ಮಡಿಸಿಕೊಂಡು ಗಾಳಿಯನ್ನು ಹೊರದಬ್ಬಬೇಕು. ಹಾಗೆ ೯೯% ಕನ್ನಡಿಗರು ಮಾಡುವುದೇ ಇಲ್ಲ. ಸಂಸ್ಕ್ರುತ ಕಲಿತ ಕನ್ನಡಿಗರೂ ಕೂಡ ಮಾಡುವುದಿಲ್ಲ.

    ಹ್ಯಾಗೆ ಎಲ್ಲ ಮೂಗುಲಿಗಳಿಗೆ '೦'ಯನ್ನು ಬಳಸುತ್ತಿದ್ದೀವಿಯೋ ಹಾಗೆ ಎಲ್ಲ ಬಗೆಯ 'ಶ'ಕಾರಗಳಿಗೆ ಬರೀ 'ಶ' ಬರಿಗೆಯನ್ನೇ ಬಳಸಬಹುದು

    ಪ್ರತ್ಯುತ್ತರಅಳಿಸಿ