ಮಂಗಳವಾರ, ಅಕ್ಟೋಬರ್ 23, 2012

ತಾಯಿ, ತಂದೆ, ತಮ್ಮ, ತಂಗಿ


ಇತ್ತೀಚಿಗೆ ಕನ್ನಡ ಮತ್ತು ಇತರೆ ದ್ರಾವಿಡ ನುಡಿಗಳಲ್ಲಿರುವ 'ತಾಯಿ' ಎಂಬ ಪದ ಸಕ್ಕದದ 'ತೋಯ' - ಅಂದರೆ ಹಾಲು, ತುಪ್ಪ - ಇಂದ ಬಂದಿದೆ ಎಂಬ ವಾದವನ್ನು ಪುಸ್ತಕವೊಂದರಲ್ಲಿ ಓದಿದೆ. ತಾಯಿ ತನ್ನ ಮಗುವಿಗೆ ಹಾಲು ನೀಡುವುದರಿಂದ 'ತೋಯ' ಎಂಬ ಪದವೇ ಮುಂದೆ 'ತಾಯ್' -> 'ತಾಯಿ' ಆಗಿದೆ ಎಂಬುದು ಆ ಬರಹಗಾರರ ವಾದ. ಇದು ನಿಜವೇ ಎಂದು ವಿಚಾರಿಸಲು ಕೊಂಚ ಆಳಕ್ಕೆ ಇಳಿಯೋಣ.

ಕನ್ನಡದಲ್ಲಿ ಆಯ್, ಆಯಿ ಅಂದರೆ ತಾಯಿ, ಅಮ್ಮ ಎಂದು. ಇದು ಇನ್ನೂ ಮರಾಟಿಯಲ್ಲಿ ಬಳಕೆಯಲ್ಲಿದ್ದರೂ ಆಡು ಕನ್ನಡದಲ್ಲಿ ಹೆಚ್ಚು ಕಡಿಮೆ ಇಲ್ಲ ಅಂತಲೇ ಹೇಳಬಹುದು. 'ಆಯಿ' ಎಂಬುದು ಬೇರು ಪದ ಎಂದು ಒಪ್ಪುವುದಾದರೆ ಅದರ ಮುಂದಿರುವ 'ತ' ಎಲ್ಲಿಂದ ಬಂತು ಅನ್ನೋ ಕೇಳ್ವಿ ಏಳುತ್ತದೆ. ಅದಲ್ಲದೆ ಬೇರು ಪದ 'ಆಯಿ' ಎಂಬುದೇ 'ಅಮ್ಮ' ಎಂಬ ಹುರುಳನ್ನು ಹೊಂದಿರುವಾಗ ಈ ಮುಂದಿನ 'ತ'-ಕಾರ ಬಂದು ಅದರ ಅರ್ತ ಮಾರ್ಪಾಟಾಗಿಲ್ಲವೇಕೆ ಎಂಬ ಇನ್ನೊಂದು ಕೇಳ್ವಿ ಮೂಡುತ್ತದೆ.

ಮೊದಲು, 'ತಾಯಿ' ಪದದ ಹಾಗೆಯೇ 'ತ' ಕಾರ ಇರುವ ಇನ್ನೂ ಮೂರು ಪದಗಳನ್ನು ಗಮನಿಸೋಣ. ತಂದೆ, ತಮ್ಮ, ತಂಗಿ. ಈಗ ಒಂದೊಂದಾಗಿ ಇವುಗಳೆಲ್ಲದರ ಮೂಲ ಮತ್ತು ಇತರೆ ರೂಪಗಳನ್ನು ಗಮನಿಸೋಣ:

ತಂದಯ್ = ಅವನ / ಅವರ ತಂದೆ
ನುಂದಯ್ = ನಿನ್ನ ತಂದೆ
ನಂದಯ್ = ನಮ್ಮ ತಂದೆ
ಎಂದಯ್ = ನನ್ನ ತಂದೆ

ತಂಗಯ್ = ಅವನ / ಅವರ ತಂಗಿ
ನುಂಗಯ್ = ನಿನ್ನ ತಂಗಿ
ನಂಗಯ್ = ನಮ್ಮ ತಂಗಿ
ಎಂಗಯ್ = ನನ್ನ ತಂಗಿ

ತಂಬಿ = ಅವನ / ಅವರ ತಮ್ಮ
ನುಂಬಿ = ನಿನ್ನ ತಮ್ಮ 
ನಂಬಿ = ನಮ್ಮ ತಮ್ಮ
ಎಂಬಿ = ನನ್ನ ತಮ್ಮ  

ಇದೇ ತೆರದಲ್ಲಿ ತಾಯಿ ಎಂಬುದು ಅವನ/ ಅವರ ತಾಯಿ ಎಂಬ ಹುರುಳುಳ್ಳದ್ದು.

ತ + ಆಯ್ = ತಾಯ್ -> ತಾಯಿ

ಹಾಗೆಯೇ, ನಾಯ್ (ನಿನ್ನ ತಾಯಿ), ಯಾಯ್ (ನನ್ನ ತಾಯಿ) ಎಂಬ ರೂಪದಗಳು ತಮಿಳಲ್ಲಿ ಬಳಕೆಯಲ್ಲಿದೆ. ಈ ಪದಗಳಲ್ಲಿ 'ತ' ಕಾರವು ತನ್ನ ಮೊದಲ ಅರ್ತವಾದ 'ಅವರು/ ಅವನು' ಎಂಬುದನ್ನು ಈಗ ಕಳೆದುಕೊಂಡಿದೆ. ಹಾಗಾಗಿ ಇಂದು ತಾಯಿ ಎಂದರೆ 'ಅವನ ಅಮ್ಮ' ಎಮ್ಬ ಅರ್ತದ ಬದಲಾಗಿ 'ಅಮ್ಮ' ಎಂಬ ಅರ್ತವಶ್ಟೇ  ಉಳಿದು ಕೊಂಡಿದೆ.

5 ಕಾಮೆಂಟ್‌ಗಳು:

  1. ಸಂದೀಪ್,

    ನುಂಗಯ್, ನುಂದಯ್, ಈ ಪದಗಳು ಎಲ್ಲಿ ಬಳಕೆಯಲ್ಲಿವೆ (ಬಳಕೆಯಲ್ಲಿದ್ದವು)?

    ಪ್ರತ್ಯುತ್ತರಅಳಿಸಿ
  2. ಪ್ರಿಯಾಂಕ್, ಒಳ್ಳೆಯ ಪ್ರಶ್ನೆ. ಇದು ಪ್ರೋಟೋ ದ್ರಾವಿಡದ ರೂಪಗಳು. ಕನ್ನಡದಲ್ಲಿ ಬಳಕೆಯಲ್ಲಿಲ್ಲ. ತಮಿಳಲ್ಲಿ ಬಳಕೆಯಲ್ಲಿದ್ದಿರ ಬಹುದು. ಇಲ್ಲಿ ನೋಡಿ: http://dsal.uchicago.edu/cgi-bin/philologic/getobject.pl?c.1:1:479.burrow

    3067 Ta. tantai father; entai my father, our father, my elder brother; my master, lord; nantai (Caldwell3, 398) our father; nuntai, untai your father; ar̤āntai father of Ar̤āṉ; āntai father of Ātaṉ; pur̤āntai father ofPur̤āṉ.

    ಪ್ರತ್ಯುತ್ತರಅಳಿಸಿ
  3. ಪ್ರೋಟೋ ದ್ರಾವಿಡ ಪದಗಳನ್ನ ಬರೀ ಊಹೆ ಮಾಡಬಹುದಷ್ಟೆ. ಈಗಿರೋ ತಮಿಳು/ಕನ್ನಡದ ಹಳೇ ಬಳಕೆಗಳಲ್ಲಿ ಈ ನಂದೈ..ಎಂಗೈ ಈ ಪದಗಳು ಇವೆಯೇ ಅನ್ನೋದನ್ನ ನೋಡಿದರೆ ಇನ್ನೂ ಬಿಡಿಸಿ ಹೇಳಬಹುದೇನೋ.

    >>ಹಾಗೆಯೇ, ನಾಯ್ (ನಿನ್ನ ತಾಯಿ), ಯಾಯ್ (ನನ್ನ ತಾಯಿ) ಎಂಬ ರೂಪದಗಳು ತಮಿಳಲ್ಲಿ
    >>ಬಳಕೆಯಲ್ಲಿದೆ.

    ಇದರ ಬಗ್ಗೆ ಹೆಚ್ಚಿನ ಮಾಹಿತಿ ಇದ್ದರೆ ಹಾಕಿ.

    ಅಲ್ಲದೆ, ನೀವು ಮರಾಠಿಯ ಆಯಿ ಯನ್ನು ಕನ್ನಡದ ಮೂಲವಾಗಿ ತೋರಿಸುತ್ತಿದ್ದೀರ. ಮಹಾರಾಷ್ಟೀ ಪ್ರಾಕೃತದಲ್ಲಿ ಇದಕ್ಕೆ ಮೂಲರೂಪಗಳಿರಬಹುದೇ ಎನ್ನುವುದನ್ನೂ ನೋಡಿದಮೇಲೆ ತೀರ್ಮಾನಿಸಬಹುದು. ಮರಾಠಿಯಲ್ಲ ಕನ್ನಡದ ಪದಗಳು ಬಹಳ ಇರುವುದು ನಿಜವೇ. ಈ ಸಂದರ್ಭದಲ್ಲಿ ’ತಾಯಿ’ ಅನ್ನುವ ಪದ ಮರಾಠಿಯಲ್ಲಿ ಅಕ್ಕ ಅನ್ನುವ ಅರ್ಥ ಗಳಿಸಿದೆ ಅನ್ನುವುದನ್ನೂ ನೆನೆಯಬಹುದು (ತಾಯಿ, ಅಣ್ಣ, ಅಪ್ಪ - ಈ ಮೂರೂ ಸಂಬಂಧ ವಾಚಕ ಪದಗಳು ಅಲ್ಲಿ ದಿಅನಬಳಕೆಯಲ್ಲಿವೆ)



    ಪ್ರತ್ಯುತ್ತರಅಳಿಸಿ
  4. ಹಂಸಾನಂದಿಯವರೇ, ಡೆಡ್ ಪ್ರಕಾರ ತಮಿಳಿನಲ್ಲಿ ಎಂದಯ್, ನುಂದಯ್, ನಾಯ್ ಇವೆಲ್ಲ ಇವೆ. ಅಂದರೆ ಹಳೆಯ ತಮಿಳಿನಲ್ಲಿ ಬಳಕೆಯಲ್ಲಿ ಇದ್ದಿರಬಹುದು. ಆದರೆ ಕನ್ನಡದಲ್ಲಿ ನನಗೆ ತಿಳಿದಂತೆ ಎಂದಿಗೂ ಬಳಕೆಯಲ್ಲಿರಲಿಲ್ಲ. ಕನ್ನಡ ಬರಹಕ್ಕಿಳಿಯುವ ಹೊತ್ತಿಗಾಗಲೇ ಇವೆಲ್ಲ ಮಾಯವಾಗಿತ್ತನಿಸುತ್ತದೆ.

    'ಆಯ್' ಎಂಬುದು ಕನ್ನಡದಿಂದಲೇ ಮರಾಟಿಗೆ ಹೋಗಿದೆ ಎಂದು ಹೇಳಲು ಬರುವುದಿಲ್ಲ. ಆದರೆ ಇದನ್ನು ನೋಡಿ: (http://dsal.uchicago.edu/cgi-bin/philologic/getobject.pl?c.0:1:367.burrow). ಇದು ಮರಾಟಿಯಲ್ಲದೆ, ಗುಜರಾತಿ, ಅಸ್ಸಾಮಿ, ಬಂಗಾಳಿ, ಒಡಿಯ, ಸಿಂದಿ ನುಡಿಗಳಲ್ಲೂ ಇದೆ ಮತ್ತು ಪಾಗದದ 'ಇಜ್ಜ' ಪದಕ್ಕೂ ಇದಕ್ಕೂ ನಂಟಿದೆ. ಯಾವ ನುಡಿ ಗುಂಪು (ಆರ್ಯ/ ದ್ರಾವಿಡ) ಇದರ ಮೂಲ ಎಂಬುದು ಹೇಳಲಾಗದಿರಬಹುದು. ನಮ್ಮ ದೇಶದ ಇಂದಿನ ಎಲ್ಲ ಆರ್ಯ ನುಡಿಗಳಿಗೂ ದ್ರಾವಿಡ 'sabstratum' ಇದೆ ಅಂತ ಹೇಳ್ತಾರೆ. ಮರಾಟಿಯಂತಹ ಆರ್ಯ ನುಡಿಗಳಲ್ಲಿ ಈ substratum ನ ಕೆಲವು ಉಳಿಕೆಗಳಲ್ಲಿ ಈ 'ಆಯ್' ಪದವೂ ಒಂದಾಗಿರಬಹುದು. ಇಲ್ಲವೇ ಆರ್ಯ ನುಡಿಗಳಿಂದಲೇ ದ್ರಾವಿಡ ನುಡಿಗಳಿಗೆ ಬಂದಿರಬಹುದು. ಹಾಗೇನಾದರೂ ಇದ್ದಲ್ಲಿ, ಬೇರೆ ಆರ್ಯ ನುಡಿಗಳಾದ ಪಾರ್ಸಿ, ಮತ್ತು ಯೂರೋಪಿನ ನುಡಿಗಳಲ್ಲಿ ಇದರ ನಂಟಿನ ಪದಗಳಿವೆಯೇ ಎಂದು ಹುಡುಕ ಬೇಕಾಗುತ್ತದೆ.

    ಪ್ರತ್ಯುತ್ತರಅಳಿಸಿ
  5. ನೀವು ಓದಿದ ಪುಸ್ತಕ ಯಾವುದು ಎಂದು ಹೇಳಿದರೆ ಅನುಕೂಲ ವಾಗುತ್ತದೆ. ಪುಸ್ತಕದ ಪ್ರಚಾರವೂ ಆಗುತ್ತದೆ ಸರಿಯಲ್ಲದಿದ್ದರೆ ವಿಮರ್ಶೆಯೂ ಮಾಡಬಹುದು. ನೀವು ರಾಘವ ನಂಬಿಯಾರರ ದ್ರಾವಿಡ ನಾಡು ನುಡಿ ಪುಸ್ತಕದ ಬಗ್ಗೆ ಹೇಳುತಿದ್ದೀರೇ? ನಂಬಿಯಾರರು ಕನ್ನಡ ಮಲಯಾಳಂ ತುಳು ಮತ್ತು ಪ್ರಾಯಶ: ತಮಿಳು ಬಹಳ ಚೆನ್ನಾಗಿ ಬಲ್ಲವರು. ಅಷ್ಟು ಲಘುವಾಗಿ ಪರಿಗಣಿಸುವಂತಿಲ್ಲ.

    ಆರ್ಯ ದ್ರಾವಿಡ ಎನ್ನುವ ವಿಭಾಗವೇ ವಿದೇಶಿಯರದ್ದು. ಆರ್ಯ ಎಂಬ ಜನಾಂಗ ಇರಲಿಲ್ಲ ಎಂದು ಮಹಾಮಹೋಪಾಧ್ಯಯ ರಂಗನಾಥ ಶರ್ಮರಂತವರು ಯಾವಾಗಲೋ ಹೇಳಿದ್ದರು. ಈಗ ರೋಮಿಲಾ ಥಪಾರ್ ಅಂತವರೂ ಒಪ್ಪಿಕೊಂಡಿದ್ದಾರೆ. ನಾನೂ ದಕ್ಷಿಣದ ಭಾಷೆಗಳು ಬೇರೆ ಎಂದು ನಂಬಿದ್ದೆ. ಆದರೆ ಅಮರಕೋಶದಂತಹ ಗ್ರಂಥಗಳನ್ನು ನೋಡಿದರೆ ದಿಗ್ಭ್ರಮೆಯಾಗುತ್ತದೆ. ಸಂಚಿ=ಸಂಚಯ, ಕಜ್ಜಿ=ಕಚ್ಛಾ ಹೀಗೆ ಭಾರತೀಯ ಭಾಷೆಗಳ ಏಕರೂಪತೆ ಹೊಮ್ಮತೊಡಗುತ್ತದೆ. ಸುಮಾರು ೧೫ನೇ ಶತಮಾನದವರೆಗೂ (ಕಲ್ಲಿನಾಥನ ಸಂಗೀತ ರತ್ನಾಕರದ ಟೀಕೆ) ವಿಶೇಷ ಬರವಣಿಗೆ ಸಂಸ್ಕ್ರತದಲ್ಲೇ ಇತ್ತು (ಲಿಪಿ ಬದಲಾದರೂ). ಹಾಗಾಗಿ ತಾಯಿ ತೋಯದಿಂದ ಬಂದಿಲ್ಲ ಎಂದು ವಾದಿಸುವುದು ಕಷ್ಟವಾಗುತ್ತದೆ. ಅಲ್ಲಗಳೆಯಲು ಭಾಷೆ ಚೆನ್ನಾಗಿ ಬಲ್ಲವರ ಆಧಾರ ಬೇಕಾಗುತ್ತದೆ.

    https://www.youtube.com/watch?v=jDRmkafUAh4&feature=share

    ಪ್ರತ್ಯುತ್ತರಅಳಿಸಿ