ಪದಹುಟ್ಟು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪದಹುಟ್ಟು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಅಕ್ಟೋಬರ್ 23, 2012

ತಾಯಿ, ತಂದೆ, ತಮ್ಮ, ತಂಗಿ


ಇತ್ತೀಚಿಗೆ ಕನ್ನಡ ಮತ್ತು ಇತರೆ ದ್ರಾವಿಡ ನುಡಿಗಳಲ್ಲಿರುವ 'ತಾಯಿ' ಎಂಬ ಪದ ಸಕ್ಕದದ 'ತೋಯ' - ಅಂದರೆ ಹಾಲು, ತುಪ್ಪ - ಇಂದ ಬಂದಿದೆ ಎಂಬ ವಾದವನ್ನು ಪುಸ್ತಕವೊಂದರಲ್ಲಿ ಓದಿದೆ. ತಾಯಿ ತನ್ನ ಮಗುವಿಗೆ ಹಾಲು ನೀಡುವುದರಿಂದ 'ತೋಯ' ಎಂಬ ಪದವೇ ಮುಂದೆ 'ತಾಯ್' -> 'ತಾಯಿ' ಆಗಿದೆ ಎಂಬುದು ಆ ಬರಹಗಾರರ ವಾದ. ಇದು ನಿಜವೇ ಎಂದು ವಿಚಾರಿಸಲು ಕೊಂಚ ಆಳಕ್ಕೆ ಇಳಿಯೋಣ.

ಕನ್ನಡದಲ್ಲಿ ಆಯ್, ಆಯಿ ಅಂದರೆ ತಾಯಿ, ಅಮ್ಮ ಎಂದು. ಇದು ಇನ್ನೂ ಮರಾಟಿಯಲ್ಲಿ ಬಳಕೆಯಲ್ಲಿದ್ದರೂ ಆಡು ಕನ್ನಡದಲ್ಲಿ ಹೆಚ್ಚು ಕಡಿಮೆ ಇಲ್ಲ ಅಂತಲೇ ಹೇಳಬಹುದು. 'ಆಯಿ' ಎಂಬುದು ಬೇರು ಪದ ಎಂದು ಒಪ್ಪುವುದಾದರೆ ಅದರ ಮುಂದಿರುವ 'ತ' ಎಲ್ಲಿಂದ ಬಂತು ಅನ್ನೋ ಕೇಳ್ವಿ ಏಳುತ್ತದೆ. ಅದಲ್ಲದೆ ಬೇರು ಪದ 'ಆಯಿ' ಎಂಬುದೇ 'ಅಮ್ಮ' ಎಂಬ ಹುರುಳನ್ನು ಹೊಂದಿರುವಾಗ ಈ ಮುಂದಿನ 'ತ'-ಕಾರ ಬಂದು ಅದರ ಅರ್ತ ಮಾರ್ಪಾಟಾಗಿಲ್ಲವೇಕೆ ಎಂಬ ಇನ್ನೊಂದು ಕೇಳ್ವಿ ಮೂಡುತ್ತದೆ.

ಮೊದಲು, 'ತಾಯಿ' ಪದದ ಹಾಗೆಯೇ 'ತ' ಕಾರ ಇರುವ ಇನ್ನೂ ಮೂರು ಪದಗಳನ್ನು ಗಮನಿಸೋಣ. ತಂದೆ, ತಮ್ಮ, ತಂಗಿ. ಈಗ ಒಂದೊಂದಾಗಿ ಇವುಗಳೆಲ್ಲದರ ಮೂಲ ಮತ್ತು ಇತರೆ ರೂಪಗಳನ್ನು ಗಮನಿಸೋಣ:

ತಂದಯ್ = ಅವನ / ಅವರ ತಂದೆ
ನುಂದಯ್ = ನಿನ್ನ ತಂದೆ
ನಂದಯ್ = ನಮ್ಮ ತಂದೆ
ಎಂದಯ್ = ನನ್ನ ತಂದೆ

ತಂಗಯ್ = ಅವನ / ಅವರ ತಂಗಿ
ನುಂಗಯ್ = ನಿನ್ನ ತಂಗಿ
ನಂಗಯ್ = ನಮ್ಮ ತಂಗಿ
ಎಂಗಯ್ = ನನ್ನ ತಂಗಿ

ತಂಬಿ = ಅವನ / ಅವರ ತಮ್ಮ
ನುಂಬಿ = ನಿನ್ನ ತಮ್ಮ 
ನಂಬಿ = ನಮ್ಮ ತಮ್ಮ
ಎಂಬಿ = ನನ್ನ ತಮ್ಮ  

ಇದೇ ತೆರದಲ್ಲಿ ತಾಯಿ ಎಂಬುದು ಅವನ/ ಅವರ ತಾಯಿ ಎಂಬ ಹುರುಳುಳ್ಳದ್ದು.

ತ + ಆಯ್ = ತಾಯ್ -> ತಾಯಿ

ಹಾಗೆಯೇ, ನಾಯ್ (ನಿನ್ನ ತಾಯಿ), ಯಾಯ್ (ನನ್ನ ತಾಯಿ) ಎಂಬ ರೂಪದಗಳು ತಮಿಳಲ್ಲಿ ಬಳಕೆಯಲ್ಲಿದೆ. ಈ ಪದಗಳಲ್ಲಿ 'ತ' ಕಾರವು ತನ್ನ ಮೊದಲ ಅರ್ತವಾದ 'ಅವರು/ ಅವನು' ಎಂಬುದನ್ನು ಈಗ ಕಳೆದುಕೊಂಡಿದೆ. ಹಾಗಾಗಿ ಇಂದು ತಾಯಿ ಎಂದರೆ 'ಅವನ ಅಮ್ಮ' ಎಮ್ಬ ಅರ್ತದ ಬದಲಾಗಿ 'ಅಮ್ಮ' ಎಂಬ ಅರ್ತವಶ್ಟೇ  ಉಳಿದು ಕೊಂಡಿದೆ.